ಆಗ್ರಾ: ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ಆತನ ಪತ್ನಿ ಜೋಧಾ ಬಾಯಿ ನಡುವೆ ಪ್ರೇಮಾಂಕುರವಾಗಿರಲಿಲ್ಲ ಎಂದು ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಹೇಳಿಕೆಯನ್ನು ನೀಡುವ ಮೂಲಕ ರಜಪೂತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಶರ್ಮಾ ಅವರು ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಶಾಸಕರಾದ ರಾಮೇಶ್ವರ ಶರ್ಮಾ, ಅಕ್ಬರ್ ಮತ್ತು ಜೋಧಾ ಬಾಯಿ ನಡುವೆ ಯಾವುದೇ ಪ್ರೀತಿ ಇರಲಿಲ್ಲ ಮತ್ತು ಅಧಿಕಾರದ ಮಹತ್ವಾಕಾಂಕ್ಷೆಗಳಿಗಾಗಿ ಈ ವಿವಾಹ ನಡೆದಿದೆ ಎಂದು ಸಾಗರದಲ್ಲಿ ನಡೆದ ಸಭೆಯಲ್ಲಿ ಶರ್ಮಾ ಈ ಹೇಳಿಕೆ ನೀಡಿದ್ದರು.
ಅಕ್ಬರ್ ಮತ್ತು ಜೋಧಾ ಬಾಯಿ ಪ್ರೇಮ ಸಂದೇಶವಾಗಲೀ, ಕಾಲೇಜಿನಲ್ಲಿ ಭೇಟಿಯಾಗಲೀ, ಕಾಫಿ ಹೌಸ್ ಮತ್ತು ಜಿಮ್ ನಲ್ಲಾಗಲೀ ಭೇಟಿಯಾಗುತ್ತಿರಲಿಲ್ಲ ಎಂದು ತಿಳಿಸಿದರು. ಈ ಹೇಳಿಕೆ ರಜಪೂತ ಸಮುದಾಯದಿಂದ ವ್ಯಾಪಕ ಖಂಡನೆ ಮತ್ತು ಟೀಕೆಗೊಳಗಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ಕ್ಷಮೆಯಾಚನೆ ನಡೆಸಿ ಅವರ ಓಲೈಕೆಗೆ ಮುಂದಾಗಿದ್ದಾರೆ.
ಈ ಕುರಿತು ಫೇಸ್ಬುಕ್ ಪೋಸ್ಟ್ ಪ್ರಕಟಿಸಿದ ಶರ್ಮಾ, ತನ್ನ ಉದ್ದೇಶ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತದ್ದಲ್ಲ. ಈ ನಿಟ್ಟಿನಲ್ಲಿ ತಾನು ಇಡೀ ರಜಪೂತ ಸಮುದಾಯದ ಕ್ಷಮೆಯಾಚಿಸುತ್ತೇನೆ. ಮಹಾರಾಜ ಪ್ರತಾಪ್ (ರಜಪೂತ) ಒಬ್ಬ ಮಹಾನ್ ನಾಯಕನೇ ಹೊರತು ಅಕ್ಬರ್ ಅಲ್ಲ ಎಂಬುದನ್ನು ಜನ ಅರ್ಥೈಸಬೇಕೆಂದು ಆತ ತಿಳಿಸಿದ್ದಾರೆ. ಮಾತ್ರವಲ್ಲ ರಜಪೂತರು ಯಾವಾಗಲೂ ಹಿಂದೂಗಳನ್ನು ಸಂರಕ್ಷಿಸಿದ್ದಾರೆ ಮತ್ತು ಅವರ ಶೌರ್ಯದ ಕಥೆಗಳ ಬಗ್ಗೆ ಜನ ಹೆಮ್ಮೆ ಪಡುತ್ತಾರೆ ಎಂದು ತಿಳಿಸಿದರು.