Home ಟಾಪ್ ಸುದ್ದಿಗಳು ಕೋವಿಡ್ ಬಗ್ಗೆ ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ: ಸಿಎಂ ಬೊಮ್ಮಾಯಿ

ಕೋವಿಡ್ ಬಗ್ಗೆ ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೋವಿಡ್ ಬಗ್ಗೆ ಗಾಬರಿಯಾಗಬೇಕಿಲ್ಲ ಆದರೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಕೋವಿಡ್ ಕುರಿತು ಕಂದಾಯ ಸಚಿವರು ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ಸಭೆ ನಡೆಸಲಿದ್ದು, ಬೂಸ್ಟರ್ ಡೋಸ್’ಗಳನ್ನು ಕೊಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರಗಳನ್ನು ಏರ್ಪಡಿಸುವುದು, ಪರೀಕ್ಷೆಗಳನ್ನು ನಡೆಸುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಮೂಲಸೌಕರ್ಯಗಳಾದ ಔಷಧಿ, ಲಸಿಕೆ ಇವೆಲ್ಲವನ್ನೂ ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸಬೇಕು, ಯಾವುದೇ ಸಂದರ್ಭದಲ್ಲಿ ಯಾವುದೂ ಕೊರತೆಯಾಗಬಾರದು, ಆಮ್ಲಜನಕ ಘಟಕಗಳನ್ನು ಡ್ರೈ ರನ್ ಮಾಡಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿಯೂ ನಿರಂತರವಾಗಿ ನಿಗಾವಹಿಸಿ, ನಿರ್ಬಂಧಗಳನ್ನು ಹೇರಲಾಗಿದೆ. ವ್ಯಕ್ತಿ, ಸಂಘ, ಸರ್ಕಾರ, ಸಮಾಜ ಎಲ್ಲರೂ ಸೇರಿ ಇದನ್ನು ಎದುರಿಸಬೇಕಿದೆ. ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.

Join Whatsapp
Exit mobile version