ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲ ಎಂದು ಬೆಳಗಾವಿ ಧರ್ಮಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್ ಹೇಳಿದ್ದಾರೆ.
ಬೆಳಗಾವಿ ಧರ್ಮಪ್ರಾಂತ್ಯದ ಕ್ಯಾಂಪ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಇಂದು (ಶನಿವಾರ) ಮಾತನಾಡಿದ ಅವರು ‘ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲದಿರುವುದರಿಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ನಾವು ಬಲವಂತದ ಹಾಗೂ ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದಕ್ಕೆ ಸಂವಿಧಾನದಲ್ಲಿ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ)ಯೂ ಇದೆ. ಹೀಗಾಗಿ, ಪ್ರತ್ಯೇಕ ಕಾಯ್ದೆಯ ಔಚಿತ್ಯವಾದರೂ ಏನು?’ ಎಂದು ಕೇಳಿದರು.
ಆಮಿಷಗಳನ್ನು ಒಡ್ಡಿ ಅಥವಾ ಬಲವಂತದಿಂದ ಮತಾಂತರ ಮಾಡುವುದು ಪಾಪದ ಕೆಲಸ. ಯಾರನ್ನು ಯಾರೂ ಆ ರೀತಿ ಮಾಡಬಾರದು. ಕ್ರೈಸ್ತ ಧರ್ಮದ ಕಾನೂನಿನ ಪ್ರಕಾರವೂ ಇದನ್ನು ನಿಷೇಧಿಸಲಾಗಿದೆ. ಯೇಸು ಕ್ರಿಸ್ತ ಕೂಡ ಯಾರನ್ನು ತಮ್ಮತ್ತ ಬಲವಂತವಾಗಿ ಕರೆಯಲಿಲ್ಲ. ಇದನ್ನು ನಾವೂ ಅನುಸರಿಸಿಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.
‘ಕ್ಯಾಥೊಲಿಕ್ ಕ್ರಿಸ್ತ ಸಭೆಯು ಅಂತರ್ಜಾತಿ ಅಥವಾ ಕ್ರೈಸ್ತರಲ್ಲದವರೊಂದಿಗೆ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ಆದರೆ, ಮತಾಂತರವಾಗಬೇಕು ಎಂದು ಹೇಳುವುದಿಲ್ಲ. ಅವರವರ ಧರ್ಮವನ್ನು ಅನುಸರಿಸುವುದಕ್ಕೆ ಅವಕಾಶವಿದೆ. ಪರಸ್ಪರರ ನಂಬಿಕೆ ಹಾಗೂ ಧರ್ಮಾಚರಣೆಯನ್ನು ಗೌರವಿಸಲಾಗುತ್ತದೆ’ ಎಂದು ಹೇಳಿದರು.