Home ಟಾಪ್ ಸುದ್ದಿಗಳು ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್ ಪುನರುಚ್ಛಾರ

ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್ ಪುನರುಚ್ಛಾರ

ಚನ್ನಪಟ್ಟಣ: ‘ಇದೇ ತಿಂಗಳ 30 ರಂದು ಇಡಿ ವಿಚಾರಣೆ ಇದ್ದು, ನಾನು ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ನನ್ನನ್ನು ಸಿಲುಕಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಇಂದು ಗೌಡಗೆರೆಯ ಚಾಮುಂಡೇಶ್ವರಿ ದೇವಿಯ ಮಹಾಮಸ್ತಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ತಪ್ಪು ಮಾಡಿಲ್ಲ, ಹಾಗಾಗಿ ಈ ತಾಯಿ ನನ್ನನ್ನು ರಕ್ಷಿಸುತ್ತಾಳೆ. ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ. ನನ್ನನ್ನು ಸಿಲುಕಿಸಲು ಏನೇನೋ ಸಂಚು ಮಾಡುತ್ತಿದ್ದಾರೆ. ಆ ಬಗ್ಗೆ ನಿಧಾನವಾಗಿ ಮಾತನಾಡುತ್ತೇನೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನೇ ಬಿಡುತ್ತಿಲ್ಲ. ಇನ್ನು ನನ್ನನ್ನು ಬಿಡುತ್ತಾರೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ದೇವಿಯಲ್ಲಿ ಏನು ಕೇಳಿಕೊಂಡಿರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ ಕೆಲವರು ನನಗೆ ಮಾಡುತ್ತಿರುವ ತೊಂದರೆಯಿಂದ ದೂರ ಮಾಡು. ಎಲ್ಲರ ದುಃಖ ದೂರ ಮಾಡು. ಈ ಭಾಗದ ಜನರಿಗೆ ನೆಮ್ಮದಿ, ಶಾಂತಿ ಸಿಗಲಿ. ಒಳ್ಳೆಯ ಮಳೆ, ಬೆಳೆ ಹಾಗೂ ಜ್ಞಾನ ಸಿಗಲಿ. ಯಾರಿಗೂ ಅನ್ಯಾಯ ಆಗಬಾರದು. ನ್ಯಾಯ ದೊರಕಿಸಿ ಕೊಡು ಎಂದು ಪ್ರಾರ್ಥಿಸಿದೆ’ ಎಂದರು.

ಬಿಜೆಪಿ ಸರಕಾರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಜನೋತ್ಸವ ಮಾಡುವ ಅಗತ್ಯ ಇಲ್ಲ ಎಂದು ಮೊದಲೇ ಹೇಳಿದ್ದೆ. ರದ್ದು ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಯಾವುದೇ ಪಕ್ಷದ ಯುವಕ ಆದರೂ ಈ ರೀತಿ ಕಗ್ಗೊಲೆ ಆಗಬಾರದು. ಕಾರ್ಯಕರ್ತರ ನೋವಿನ ಬಗ್ಗೆ ನಮಗೆ ಅರಿವಿದೆ. ಈ ಪ್ರಕರಣ ಖಂಡಿಸುತ್ತೇನೆ. ಮುಖ್ಯಮಂತ್ರಿಗಳು ಎಲ್ಲಾ ಕಾನೂನು ಬಳಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಯಾವುದೇ ಪಕ್ಷ, ಧರ್ಮದವರಾದರೂ ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ ‘ ಎಂದು ತಿಳಿಸಿದರು.

Join Whatsapp
Exit mobile version