Home ರಾಜ್ಯ ನಿರ್ಮಲಾ ಪ್ರಕರಣಕ್ಕೂ, ಸಿದ್ದರಾಮಯ್ಯ ಹಗರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ: ಆರ್.ಅಶೋಕ್

ನಿರ್ಮಲಾ ಪ್ರಕರಣಕ್ಕೂ, ಸಿದ್ದರಾಮಯ್ಯ ಹಗರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ: ಆರ್.ಅಶೋಕ್

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಆದೇಶಕ್ಕೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಮುಡಾ’ ಹಗರಣಕ್ಕೂ ವ್ಯತ್ಯಾಸವಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.


ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಕಬಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ವಂತಕ್ಕಾಗಿ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೂ ₹1,200 ಕೋಟಿಗೂ ಅಧಿಕ ಹಣ ಸಂದಾಯವಾಗಿದೆ. ಆ ಹಣವನ್ನು ಮೊದಲು ವಾಪಸ್ ನೀಡಲಿ, ನಂತರ ಸಚಿವರ ರಾಜೀನಾಮೆ ಕೇಳಲಿ’ ಎಂದರು.


ಎಲ್ಲ ಪಕ್ಷಗಳು ದೇಣಿಗೆ ಸಂಗ್ರಹ ಮಾಡಿವೆ. ಪಕ್ಷಕ್ಕಾಗಿ ಹಣ ಸಂಗ್ರಹಿಸಿದವರ ಮೇಲೆ ಎಫ್ಐಆರ್ ದಾಖಲಿಸುವುದಾದರೆ, ಎಲ್ಲರ ಮೇಲೂ ದಾಖಲಿಸಬೇಕಾಗುತ್ತದೆ. ಸಿದ್ದರಾಮಯ್ಯ ಅವರೇ ಹೇಳಿಸಿ ನಿರ್ಮಲಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಅನುಮಾನವಿದೆ. ಇಂತಹ ದೂರು ಕೇವಲ ರಾಜಕೀಯ ಪ್ರೇರಿತ ಎಂದು ತಿಳಿಸಿದರು.

Join Whatsapp
Exit mobile version