Home ಕರಾವಳಿ ಸಾಬಿಯಾ ಸೈಫಿ ಅತ್ಯಾಚಾರ, ಹತ್ಯೆ ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಿಂದ ಪ್ರತಿಭಟನೆ

ಸಾಬಿಯಾ ಸೈಫಿ ಅತ್ಯಾಚಾರ, ಹತ್ಯೆ ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಿಂದ ಪ್ರತಿಭಟನೆ

ಮಂಗಳೂರು: ಸಿವಿಲ್ ಪೊಲೀಸ್ ಆಗಿದ್ದ ಸಾಬಿಯಾ ಸೈಫಿ ಅತ್ಯಾಚಾರ ಮತ್ತು ಬರ್ಬರ ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದ ಮೌನವನ್ನು ನೋಡಿದಾಗ ಈ ಘಟನೆಯನ್ನು ಮುಚ್ಚಿಡುವುದಕ್ಕೆ ಶ್ರಮಿಸಲಾಗುತ್ತಿದೆ ಎಂಬುದು ಖಚಿತವಾಗಿದೆ.

ಪೊಲೀಸ್ ಇಲಾಖೆ ಹಾಗೂ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಆದ್ದರಿಂದ ಈ ವಿಷಯದಲ್ಲಿ SIT ತನಿಖೆಯಾಗಬೇಕು ಎಂದು ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶ ಬಜ್ಪೆ ಒತ್ತಾಯಿಸಿದ್ದಾರೆ.
ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮಹಿಳಾ ಅಭದ್ರತೆ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಸುರತ್ಕಲ್ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಅತಿಥಿಗಳಾದ ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಫರ್ಝಾನ ಮಾತನಾಡಿ, ದೇಶವನ್ನೇ ಬೆಚ್ಚಿ ಬೀಳಿಸುವಂತೆ ರಾಜ್ಯದಲ್ಲಿ ಸರಣಿ ಅತ್ಯಾಚಾರ ಸಾಮೂಹಿಕ ಅತ್ಯಾಚಾರ ಕಗ್ಗೊಲೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ವರದಿಗಳ ಪ್ರಕಾರ ಭಾರತವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶವಾಗಿ ಗುರುತಿಸಲ್ಪಟ್ಟಿದೆ. ಪ್ರತಿ ಹದಿನೈದು ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿಯಿಂದ ತಿಳಿದು ಬರುತ್ತದೆ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಸಂಶಾದ್ ಅಬೂಬಕರ್ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ಅತ್ಯಾಚಾರವನ್ನು ಜಾತಿ, ಧರ್ಮಾಧಾರಿತವಾಗಿ ಅಳೆಯುವ ಮನೋಭಾವ ಹೆಚ್ಚಾಗುತ್ತಿದೆ. ಮಹಿಳೆ ಎರಡನೇ ದರ್ಜೆಯವಳೆಂಬ ಮನಸ್ಥಿತಿಯೂ ಮಹಿಳೆಯ ಘನತೆಯನ್ನು ಕುಗ್ಗಿಸುತ್ತಿದೆ. ಅತ್ಯಾಚಾರಿಗಳಿಗೆ ರಾಜಕೀಯ ಬೆಂಬಲ, ಸಂತ್ರಸ್ತರಿಗೆ ನ್ಯಾಯನಿರಾಕರಣೆ ಮತ್ತು ನ್ಯಾಯವ್ಯವಸ್ಥೆಯ ವಿಳಂಬ ನೀತಿ ,ಮಾಧ್ಯಮಗಳ ತಾರತಮ್ಯ ನೀತಿ ,ಅಮಲು ಪದಾರ್ಥಗಳು, ಅಶ್ಲೀಲ ವೆಬ್ ಸೈಟ್ ಗಳು, ಬಯಲು ಶೌಚ ಇತ್ಯಾದಿ ಮಹಿಳಾ ದೌರ್ಜನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಸರಕಾರ ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಮಹಿಳಾ ಭದ್ರತೆಯನ್ನು ಖಾತ್ರಿ ಪಡಿಸಬೇಕೆಂದು ಎಂದು ಆಗ್ರಹಿಸಿದರು.


15 ದಿನದೊಳಗೆ ಮತ್ತೆ ಅಡುಗೆ ಅನಿಲ ಬೆಲೆ 50 ರೂ. ಏರಿಕೆಯಾಗಿದ್ದು, ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಡಿಮೋನಿಟೈಸೇಶನ್, GST, ಲಾಕ್ ಡೌನ್ ನಿಂದಾಗಿ ನೆಲಕಚ್ಚಿದ ಆರ್ಥಿಕತೆಯ ಬೆನ್ನಿಗೆ ಗ್ಯಾಸ್ ಬೆಲೆ ಏರಿಕೆಯು ಮಹಿಳೆಯರನ್ನು ನೇರವಾಗಿ ಬಾಧಿಸಲಿದೆ ಹಾಗೂ ಕೌಟುಂಬಿಕ ಹಿಂಸೆಗೆ ಇದು ಕಾರಣವಾಗಲಿದೆ. ಲಾಕ್ ಡೌನ್ ಸಂದರ್ಭ ಸದ್ದಿಲ್ಲದೆ ಸಬ್ಸಿಡಿಯನ್ನು ರದ್ದುಪಡಿಸಿರುವ ಸರಕಾರವು ಮಹಿಳಾ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದರು.


ಸರಕಾರ ಕೂಡಲೇ ಅಡುಗೆ ಅನಿಲ ಸಾಮಗ್ರಿಗಳು ದಿನಬಳಕೆ ವಸ್ತುಗಳು ಔಷಧಿಗಳನ್ನು ಕೈಗೆಟಕುವಂತೆ ತೆರಿಗೆ ಕಡಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಸಮಿತಿ ಸದಸ್ಯೆ ರುಮಾನ ಹಾಗೂ ವಿಮ್ ಜಿಲ್ಲಾ ಕೋಶಾಧಿಕಾರಿ ಝುಲೈಖ ಪರ್ಲಿಯ ಮತ್ತಿತರರು ಭಾಗವಹಿಸಿದ್ದರು.

Join Whatsapp
Exit mobile version