►ವಾಯ್ಸ್ ಆಫ್ ಟ್ರಸ್ಟಿನ ಲಾಂಛನ ಅನಾವರಣ
ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮತ್ತು ಗ್ರೂಫ್ ಆಫ್ ತಾಜ್ ಇದರ ಜಂಟಿ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಕೂಟ ಹಾಗೂ ವಾಯ್ಸ್ ಆಫ್ ಟ್ರಸ್ಟಿನ ಲಾಂಛನ ಅನಾವರಣ ಕಾರ್ಯಕ್ರಮ ಗುರುವಾರ ಸಂಜೆ ಸಿಟಿ ಟವರ್‌ನ ಆವರಣದಲ್ಲಿ ನಡೆಯಿತು.
ಬಹು! ಶೇಕ್ ಮುಹಮ್ಮದ್ ಇರ್ಫಾನಿ ಫೈಝಿ ಅಲ್ ಅಝ್ಹರಿ ಲಾಂಛನ ಅನಾವರಣಗೊಳಿಸಿದರು. ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಬಂದರ್ ಅವರು ದಿ ವಾಯ್ಸ್ ಆಫ್ ಟ್ರಸ್ಟ್‌ನ ಲಾಂಛನವನ್ನು ಮಾಜಿ ಮೇಯರ್, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ರವರಿಗೆ ನೀಡುವ ಮೂಲಕ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಮೇಯರ್ ಅಶ್ರಫ್ ಕೆ. ಅವರು, ರವೂಫ್ ಅವರ ನೇತೃತ್ವದಲ್ಲಿ ಈ ಸಂಸ್ಥೆ ಉತ್ತಮ ಸಮಾಜಮುಖೀ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಸೌಹಾರ್ದತೆಗೂ ಒತ್ತು ನೀಡುತ್ತಿದೆ ಎಂದು ಶ್ಲಾಘಿಸಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರು ಮಾತನಾಡಿ, ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ರಕ್ತದಾನ ಶಿಬಿರದ ಮೂಲಕ ಸಾವಿರಾರು ಮಂದಿಗೆ ಜೀವ ಉಳಿಸಲು ನೆರವಾಗಿದ್ದಾರೆ. ಇದೀಗ ಇಪ್ತಾರ್ ಕೂಟ ಆಯೋಜಿಸಿ ಸೌಹಾರ್ದತೆಗೂ ಒತ್ತು ನೀಡಿ ಸಮಾಜದಲ್ಲಿ ಶಾಂತಿ, ಸಾಮರಸ್ಯ ಜೀವನಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ರೂವಾರಿ ಅಬ್ದುಲ್ ರವೂಫ್ ಅವರು ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಡಾ.ಸುಮತಿ ಎಸ್. ಹೆಗ್ಡೆ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಶಂಸುದ್ದೀನ್ ಬಂದರ್, ಸಾಹಿತಿ ಹುಸೈನ್ ಕಾಟಿಪಳ್ಳ, ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷರಾದ ಬಿ.ಕೆ. ಇಮ್ತಿಯಾಝ್, ಪ್ರಕಾಶ್ ಸಾಲ್ಯಾನ್, ಸುಹೈಲ್ ಕಂದಕ್, ಎಂ.ಕೆ.ಝಹೀರ್ ಅಬ್ಬಾಸ್, ಸಾದಿಕ್, ನಝೀರ್ ದೇರಳಕಟ್ಟೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನ ಅಧ್ಯಕ್ಷರಾದ ಓಸ್ವಾಲ್ ಫುರ್ಟಾಡೊ ಅಧ್ಯಕ್ಷತೆ ವಹಿಸಿದ್ದರು.