Home ಟಾಪ್ ಸುದ್ದಿಗಳು ಕನ್ನಡಿಗರಾದ ನ್ಯಾ. ಅರವಿಂದ್ ಕುಮಾರ್ ಸೇರಿ ಇಬ್ಬರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು

ಕನ್ನಡಿಗರಾದ ನ್ಯಾ. ಅರವಿಂದ್ ಕುಮಾರ್ ಸೇರಿ ಇಬ್ಬರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು

ನವದೆಹಲಿ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ಅರವಿಂದ್‌ ಕುಮಾರ್ ಹಾಗೂ ರಾಜೇಶ್‌ ಬಿಂದಾಲ್ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಮಂಗಳವಾರ ಶಿಫಾರಸು ಮಾಡಿದೆ.


ನ್ಯಾ. ಅರವಿಂದ್‌ ಕುಮಾರ್‌ ಮತ್ತು ನ್ಯಾ. ಬಿಂದಾಲ್‌ ಅವರು ಕ್ರಮವಾಗಿ ಗುಜರಾತ್‌ ಹೈಕೋರ್ಟ್‌ ಮತ್ತು ಅಲಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೈಕೋರ್ಟ್‌ಗಳಲ್ಲಿನ ಮುಖ್ಯ ನ್ಯಾಯಮೂರ್ತಿ ಮತ್ತು ಹಿರಿಯ ನ್ಯಾಯಮೂರ್ತಿಗಳಲ್ಲಿ ಅವರ ಹಿರಿತನ ಹಾಗೂ ದೇಶದ ಒಟ್ಟಾರೆ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಒಟ್ಟಾರೆ ಹಿರಿತನ; ಜೊತೆಗೆ ಅರ್ಹತೆ, ಕಾರ್ಯಕ್ಷಮತೆ ಹಾಗೂ ದಕ್ಷತೆ; ಅಲ್ಲದೆ ಸುಪ್ರೀಂಕೋರ್ಟ್‌ನ ವೈವಿಧ್ಯಮಯ ಆಯ್ಕೆ ಹಾಗೂ ಒಳಗೊಳ್ಳುವಿಕೆ; ಇದರೊಟ್ಟಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಪಕ ಪ್ರಾತಿನಿಧ್ಯ ಇಲ್ಲದ ಹೈಕೋರ್ಟ್‌ಗಳನ್ನು ಗಣನೆಗೆ ತೆಗೆದುಕೊಂಡು ಈ ಆಯ್ಕೆ ಮಾಡಲಾಗಿದೆ ಎಂದು ಕೊಲಿಜಿಯಂ ಹೇಳಿದೆ.


ಐವರು ಬೇರೆ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು 2022 ರ ಡಿಸೆಂಬರ್ 13ರಂದು ಕೊಲಿಜಿಯಂ ಮಾಡಿದ್ದ ಶಿಫಾರಸಿಗೆ ಪೂರಕವಾಗಿ ಈ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈ ಹಿಂದೆ ಶಿಫಾರಸು ಮಾಡಿದ ಐವರು ನ್ಯಾಯಮೂರ್ತಿಗಳು ನ್ಯಾ. ಅರವಿಂದ್‌ ಕುಮಾರ್‌ ಹಾಗೂ ನ್ಯಾ. ರಾಜೇಶ್‌ ಬಿಂದಾಲ್‌ ಅವರಿಗಿಂತಲೂ ಹೆಚ್ಚು ಹಿರಿತನ ಹೊಂದಿರುತ್ತಾರೆ ಎಂದು ಕೊಲಿಜಿಯಂ ನಿರ್ಣಯ ತಿಳಿಸಿದೆ.


ನ್ಯಾ. ರಾಜೇಶ್‌ ಬಿಂದಾಲ್‌ ಅವರನ್ನು ಕೊಲಿಜಿಯಂ ಸರ್ವಾನುಮತದಿಂದ ಆಯ್ಕೆ ಮಾಡಿತಾದರೂ ನ್ಯಾ. ಅರವಿಂದ್‌ ಕುಮಾರ್‌ ಅವರ ಹೆಸರನ್ನು ನಂತರದ ಹಂತದಲ್ಲಿ ಪರಿಗಣಿಸಬಹುದು ಎಂಬ ಕಾರಣಕ್ಕೆ ನ್ಯಾ. ಕೆ ಎಂ ಜೋಸೆಫ್‌ ಅವರು ಅಸಮ್ಮತಿ ಸೂಚಿಸಿದರು.


ನ್ಯಾ. ಅರವಿಂದ್‌ ಕುಮಾರ್‌ ಅವರು ಜೂನ್ 2009 ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಡಿಸೆಂಬರ್ 2012ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ದೃಢೀಕರಿಸಲಾಯಿತು. ಅಕ್ಟೋಬರ್ 2021 ರಲ್ಲಿ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪದೋನ್ನತಿ ಪಡೆದರು.


ಅಖಿಲ ಭಾರತ ಹಿರಿತನದ ಪ್ರಕಾರ, ನ್ಯಾ. ಅರವಿಂದ್‌ ಕುಮಾರ್ ಪ್ರಸ್ತುತ ಹೈಕೋರ್ಟ್ ನ್ಯಾಯಾಧೀಶರಲ್ಲಿ 26 ನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಇದಲ್ಲದೆ, ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಿಂದ ಬಂದಿರುವ ನ್ಯಾಯಮೂರ್ತಿಗಳಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿದ್ದಾರೆ ಎಂಬ ಕಾರಣಕ್ಕೆ ಕೊಲಿಜಿಯಂ ನ್ಯಾ. ಅರವಿಂದ್‌ ಕುಮಾರ್‌ ಅವರ ಹೆಸರನ್ನು ಪೀಠಕ್ಕೆ ಶಿಫಾರಸು ಮಾಡಿತು.


ನ್ಯಾ. ರಾಜೇಶ್ ಬಿಂದಾಲ್ ಅವರನ್ನು ಮಾರ್ಚ್ 2006ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಂತಿಮವಾಗಿ 2021ರ ಅಕ್ಟೋಬರ್‌ನಲ್ಲಿ ಅಲಾಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಿರಿತನದ ಪ್ರಕಾರ, ನ್ಯಾ.ಬಿಂದಾಲ್ ಅವರು ದೇಶದ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲೇ ಎರಡನೇ ಅತಿ ಹಿರಿಯವರಾಗಿದ್ದಾರೆ ಎಂದು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಮಂಡಳಿಯಾದ ಕೊಲಿಜಿಯಂ ವಿವರಿಸಿದೆ.


ಅವರ ಹೆಸರನ್ನು ಶಿಫಾರಸು ಮಾಡುವಾಗ, ನ್ಯಾಯಮೂರ್ತಿ ಬಿಂದಾಲ್ ಅವರ ಪೋಷಕ ಹೈಕೋರ್ಟ್ ಆಗಿರುವ ಅತಿದೊಡ್ಡ ಹೈಕೋರ್ಟ್‌ಗಳಲ್ಲಿ ಒಂದೆನಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಪಕ ಪ್ರಾತಿನಿಧ್ಯವಿರಲಿಲ್ಲ ಎಂದು ಕೊಲಿಜಿಯಂ ಹೇಳಿದೆ.
(ಕೃಪೆ: ಬಾರ್ &ಬೆಂಚ್)

Join Whatsapp
Exit mobile version