ರಾಜ್ಯಾದ್ಯಂತ ಬಿಸಿಲಿನ ಧಗೆ ಜೋರಾಗಿದೆ. ತಂಗಾಳಿಯ ಸುಳಿವಿಲ್ಲದೇ, ಏರುತ್ತಿರುವ ಬಿಸಿಲ ಧಗೆಯಿಂದ ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳೂ ಹೈರಾಣಾಗುತ್ತಿವೆ. ಬಿಸಿಲ ಬೇಗೆಯಿಂದ ಪಾರಾಗಲು ಕೆರೆ, ಹಳ್ಳ ಮುಂತಾದವುಗಳನ್ನು ಅರಸುತ್ತ ಸಾಗುತ್ತಿರುವ ಪ್ರಾಣಿಗಳು ನೀರಿನಲ್ಲಿ ತಮ್ಮ ದೇಹವನ್ನು ತಂಪಾಗಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇನ್ನು ಮುಂದಿನ 24 ಗಂಟೆಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಕೊಡಗು, ಶಿವಮೊಗ್ಗ, ದಾವಣಗೆರೆಯಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಉಳಿದೆಡೆ ಒಣಹವೆ ಮುಂದುವರೆಯಲಿದೆ.