ಬೆಂಗಳೂರು: ಕೋವಿಡ್ ನಿಂದಾದ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಿ ಸುಮಾರು ಹದಿನೈದು ಸಾವಿರ ಕೋಟಿಗೂ ಅಧಿಕ ಆದಾಯ ಗಳಿಸಿದ್ದು, ರಾಜ್ಯ ಆರ್ಥಿಕ ಪ್ರಗತಿಯತ್ತ ದಾಪುಗಾಲಿಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 76 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ವಿಶಿಷ್ಟ ರಾಜ್ಯ. ಕೃಷಿಯಲ್ಲಿ ಅತಿಹೆಚ್ಚು ಉತ್ಪಾದನೆ, ಅತಿ ಹೆಚ್ಚು ಸ್ಟಾರ್ಟ್ ಅಪ್, ಯೂನಿಕಾರ್ನ್ ,ಡೆಕಾಕಾರ್ನ್ ಇಲ್ಲಿವೆ. ತಂತ್ರಜ್ಞಾನದಲ್ಲಿ ಕರ್ನಾಟಕ ನಂ.1 ನಲ್ಲಿದೆ. ನಮ್ಮ ರಾಜ್ಯದ ಒಟ್ಟು ತಲಾವಾರು ಆದಾಯ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.9 ರಷ್ಟು ಬೆಳೆಯುತ್ತಿದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದ ರಾಜ್ಯ ನಮ್ಮದಾಗಿದೆ ಎಂದರು.
ಸರ್ಕಾರ ಕೋವಿಡ್ ನಲ್ಲಿ ವೈದ್ಯರು ಆಶಾ ಕಾರ್ಯಕರ್ತರು, ದಾದಿಯರು, ಪೊಲೀಸ್, ಸರ್ಕಾರಿ ನೌಕರರು ಕೋವಿಡ್ ಸಂದರ್ಭದಲ್ಲಿ ಅವರ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಒಂದು ಜನಾಂಗವನ್ನು ಉಳಿಸುವ ಕಾರ್ಯ ನಡೆದಿದೆ. ರಾಜ್ಯದಲ್ಲಿ ಎಂಟು ಕೋಟಿ ಲಸಿಕೆ ನೀಡಲಾಗಿದೆ ಎಂದರು.
ದೇಶಕ್ಕೆ ಜನತೆಯ ಶ್ರಮ, ಶ್ರದ್ಧೆ, ಅಭಿಮಾನ, ಬೆವರಿನ ಹನಿ ಮುಖ್ಯ. ದೇಶ ಮೊದಲು ಎನ್ನುವ ಭಾವನೆ ಇರಬೇಕು. ದೇಶ ಸ್ವಾಭಿಮಾನದ ಸಂಕೇತ. ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಎಪ್ಪತ್ತೈದು ವರ್ಷಗಳು ಸಾಗಿ ಬಂದ ಹಿನ್ನೆಲೆಯಲ್ಲಿ ನಾವೀಗ ಹಿಂದಿರುಗಿ ನೋಡಬೇಕು. ನಡೆದು ಬಂದ ಈ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ ಎಂದರು.
ಅಮೃತ ಯೋಜನೆಗಳನ್ನು ಕಳೆದ ಬಾರಿ ಘೋಷಣೆ ಮಾಡಲಾಯಿತು. ಒಂದು ವರ್ಷದಲ್ಲಿ ಅವುಗಳನ್ನು ನಾವು ಮಾಡಿ ಪೂರೈಸಿದ್ದೇವೆ. ಅಮೃತ ಯೋಜನೆಯಡಿಯಲ್ಲಿ 750 ಗ್ರಾಮ ಪಂಚಾಯತಿ ಅಭಿವೃದ್ಧಿಗೆ 25 ಲಕ್ಷ ರೂ.ಶಾಲೆಗಳ ಅಭಿವೃದ್ಧಿ, ಎಪ್ಪತ್ತೈದು ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ಒದಗಿಸಲಾಗಿದೆ ಎಂದರು.
ಅಮೃತ ಮಹೋತ್ಸವದ ನಮ್ಮ ಕೆಲಸ ಮುಂದಿನ ದಿನಗಳಿಗೆ ಸ್ಪೂರ್ತಿ. ಈ ವರ್ಷ ಭರಸೆಯ ಬಜೆಟ್ ಮಂಡಿಸಲಾಗಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಯುವಕರಿಗೆ ಸುಮಾರು 5 ಲಕ್ಷ ಕೈಗಳಿಗೆ ಕೆಲಸವನ್ನು 1.5 ಲಕ್ಷ, ಹತ್ತು ಲಕ್ಷ ರೂ.ಗಳ ಯೋಜನೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮೂಲಕ ಇವರಿಗೆ ಬೆಂಬಲ ನೀಡಿದರೆ ನಾಡಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಆರ್ಥಿಕತೆ ಎಂದರೆ ದುಡ್ಡಲ್ಲ, ಜನರ ದುಡಿಮೆ ಎಂದು ಅರಿತಿದ್ದೇವೆ. ಹತ್ತು ಲಕ್ಷ ರೈತರ ಮಕ್ಕಳಿಗೆ 430 ಕೋಟಿ ರೂ. ರೈತ ವಿದ್ಯಾನಿಧಿ ಮೂಲಕ ವಿತರಿಸಲಾಗಿದೆ. ಕಾರ್ಮಿಕರಿಗೆ, ದೀನದಲಿತರರಿಗೆ ಸ್ವಯಂ ಉದ್ಯೋಗ ಯೋಜನೆ, ಹಿಂದುಳಿದ ವರ್ಗದವರಿಗೆ ಕನಕದಾಸ ವಿದ್ಯಾರ್ಥಿನಿಲಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ’ ಸಾವಿರ ಕೊಠಡಿಗಳ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದರು.
ರೈತರಿಗೆ ಯಶಸ್ವಿನಿ, ಕ್ಷೀರಸಮೃದ್ಧಿ ಬ್ಯಾಂಕ್, ಮೂವತ್ತು ಲಕ್ಷ ರೈತರಿಗೆ ಸಾಲ. 3 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯ ಹೆದ್ದಾರಿ, ರೈಲ್ವೆ ಮಾರ್ಗ, ಬಂದರು, ಮೂಲಸೌಲಭ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕಣ್ಣು ತಪಾಸಣೆ ಮಾಡಿ ಕನ್ನಡಕ ನೀಡುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ದೃಷ್ಟಿ ನೀಡುವ ಕೆಲಸ ಪ್ರಾರಂಭಗೊಂಡಿದೆ. ಆಸಿಡ್ ದಾಳಿಗೆ ತುತ್ತಾದವರಿಗೆ ಮೂರರಿಂದ ಹತ್ತು ಸಾವಿರ ರೂ.ಗಳ ಹೆಚ್ಚಳ, ಪೌರಕಾರ್ಮಿಕರ ಗೌರವಧನ ಹೆಚ್ಚಿಸಿದೆ. ಕಳೆದ ವರ್ಷ, ಅತಿ ವೃಷ್ಟಿ ಹಾಗೂ ಪ್ರವಾಹದಿಂದ, ಮನೆ ಕಳೆದುಕೊಂಡಿರುವವರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಿಗಿಂತ ಹೆಚ್ವಿನ ಪರಿಹಾರ ನೀಡಿದೆ ಎಂದರು.
ನಾಡಿನ ಅಭಿವೃದ್ಧಿಗೆ 3 ಇ ಗಳು- ಈಸ್ ಆಫ್ ಲಿವಿಂಗ್, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಈಸ್ ಆಫ್ ಅಪ್ ಬ್ರಿಂಗಿಂಗ್ ಗಳನ್ನು ಆಧಾರಿಸಿದ್ದೇವೆ. ಹಾಗೂ ದೀನದಲಿತರನ್ನು ಸಶಕ್ತಗೊಳಿಸಲು 3 ಇಗಳು,- ಶಿಕ್ಷಣ, ಉದ್ಯೋಗ , ಸಬಲೀಕರಣದ ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ.
ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದು, ಇದಕ್ಕೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಕೊಡುಗೆ ನೀಡುವ ವಿಶ್ವಾಸವಿದೆ. ನಮ್ಮಲ್ಲಿ ಸಂಕಲ್ಪ, ಛಲ. ದೂರದೃಷ್ಟಿ ಇದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಲಾಗುತ್ತಿದೆ. 6 ಇಂಜಿನಿಯರ್ ಕಾಲೇಜುಗಳನ್ನು ಐಐಟಿ ಮಾದರಿಯ ಕಾಲೇಜುಗಳನ್ನಾಗಿ ಮಾಡಲಾಗುತ್ತಿದೆ, 5 ಹೊಸ ಅಂತರರಾಷ್ಟ್ರೀಯ ಮಟ್ಟದ ನಗರಗಳನ್ನು ಕಟ್ಟುತ್ತಿದ್ದೇವೆ. ನೀರಾವರಿ ಯೋಜನೆಗಳನ್ನು ಸಮಯದಲ್ಲಿ ಪೂರ್ಣ ಮಾಡಿ, ರಾಜ್ಯದ ಪ್ರತಿಯೊಂದು ಹನಿ ನೀರನ್ನು ಸಮಪರ್ಕವಾಗಿ ಬಳಸಲು ಸಂಕಲ್ಪ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರಾವರಿಯಲ್ಲಿ ಕ್ಷಮತೆ ಕಾಯ್ದುಕೊಳ್ಳಲಾಗಿದೆ ಎಂದರು.
ಕರ್ನಾಟಕದ ಕೊಡುಗೆ: ಇವೆಲ್ಲಕ್ಕೂ ಮುನ್ನ 1824 ರಲ್ಲಿ ಮೊದಲ ಸಿಪಾಯಿ ದಂಗೆ, ಕನ್ನಡ ನಾಡಿನ ವೀರ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಮೊದಲು ಸಡ್ಡು ಹೊಡೆದಿದ್ದು, ಬ್ರಿಟೀಷ್ ಕಮೀಷನರ್ ಥ್ಯಾಕರೆಯನ್ನು ಯುದ್ಧದಲ್ಲಿ ಮಾರಣಹೋಮವನ್ನು ಮಾಡಿ, ಇಡೀ ದೇಶಕ್ಕೆ ನಮ್ಮ ಸಣ್ಣ ರಾಜ್ಯ ಬ್ರಿಟಿಷ್ ರನ್ನು ಸಹ ಸೋಲಿಸಬಹುದು ಎಂದು ತೋರಿಸಿಕೊಟ್ಟರು ಎಂದರು.