Home ಟಾಪ್ ಸುದ್ದಿಗಳು 10,000 ಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದ ರಾಜ್ಯ ಸರ್ಕಾರ

10,000 ಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ಧ್ವನಿವರ್ಧಕಗಳ ಬಳಕೆ ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಮೇ 10ರಂದು ಗೃಹ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅರ್ಜಿಗಳ ಪರಿಶೀಲನೆ ಪೂರ್ಣಗೊಳಿಸಿರುವ ಗೃಹ ಇಲಾಖೆ ಹತ್ತು ಸಾವಿರಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿ ವರ್ಧಕ ಬಳಸಲು ಅನುಮತಿ ನೀಡಿದೆ.

ಈ ಕುರಿತು ಸುತ್ತೋಲೆ ಹೊರಡಿಸಿದ ರಾಜ್ಯ ಸರಕಾರ 10,889 ಮಸೀದಿಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 17,850 ಕಡೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದೆ. ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದ್ದು, 450ರೂ ಶುಲ್ಕ ವಿಧಿಸಲಾಗಿದೆ.


ಗೃಹ ಇಲಾಖೆ ಒದಗಿಸಿರುವ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಅತ್ಯಧಿಕ 1,841 ಪರವಾನಗಿಗಳನ್ನು ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 744 ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯ ಮಸೀದಿಗಳು ಪರವಾನಗಿ ಪಡೆದ ಜಿಲ್ಲೆಯಾಗಿದೆ.


ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬಾರದು ಎಂದು ಬಜರಂಗ ದಳ, ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳು ಗಲಾಟೆ ಎಬ್ಬಿಸಿತ್ತು. ಮಸೀದಿಗಳಲ್ಲಿ ಆಝಾನ್ ಕೂಗುವುದಕ್ಕೆ ಪ್ರತಿಯಾಗಿ ಕೆಲವೆಡೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಅಭಿಯಾನವನ್ನೂ ಹುಟ್ಟುಹಾಕಿತ್ತು.


ಆದುದರಿಂದ ಮೇ 10ರಂದು ಸುತ್ತೋಲೆ ಹೊರಡಿಸಿದ್ದ ಗೃಹ ಇಲಾಖೆ, ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯಗೊಳಿಸಿತ್ತು. ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಪ್ರಕಾರ ನಿಗದಿತ ಪ್ರಮಾಣದ ಶಬ್ಧದ ಮಿತಿಯನ್ನೂ ಜಾರಿಗೊಳಿಸುವಂತೆ ಸೂಚಿಸಿತ್ತು.

ಇದೀಗ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲು ಸರಕಾರ ಅನುಮತಿ ನೀಡಿದ್ದು, 10,889 ಮಸೀದಿಗಳಿಗೆ ಧ್ವನಿವರ್ಧಕ ಬಳಸುವ ಪರವಾನಗಿ ದೊರಕಿದೆ.

Join Whatsapp
Exit mobile version