Home ಟಾಪ್ ಸುದ್ದಿಗಳು ಕೊರೋನಾ ಕಾಲದ ಎರಡನೇ ಹಜ್ಜ್; ಮಕ್ಕಾ ತಲುಪಿದ ಯಾತಾರ್ಥಿಗಳು

ಕೊರೋನಾ ಕಾಲದ ಎರಡನೇ ಹಜ್ಜ್; ಮಕ್ಕಾ ತಲುಪಿದ ಯಾತಾರ್ಥಿಗಳು

ರಿಯಾದ್: ಕೋವಿಡ್ ಸಾಂಕ್ರಾಮಿಕದ ಮಧ್ಯೆ ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿ ಸೌದಿ ಅರೇಬಿಯಾದ ಮಕ್ಕಾದಲ್ಲಿ ಹಜ್ ನಿರ್ವಹಿಸಲು ಯಾತ್ರಾರ್ಥಿಗಳು ಇಂದಿದಿಂದ ಪವಿತ್ರ ನಗರ ಮಕ್ಕಾಗೆ ಆಗಮಿಸುತ್ತಿದ್ದಾರೆ,
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಡೆಯುತ್ತಿರುವ ಎರಡನೇ ಪವಿತ್ರ ಹಜ್ಜ್ ಇದಾಗಿದೆ. ಭಾನುವಾರದಿಂದ ಹಜ್ ನ ಅಧಿಕೃತ ವಿಧಿ ವಿಧಾನಗಳು ಆರಂಭಗೊಳ್ಳಲಿವೆ.

ಮಕ್ಕಾದ ಗ್ರ್ಯಾಂಡ್ ಮಸೀದಿಯ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದಲೇ ಯಾತ್ರಿಕರನ್ನು ಸ್ವಾಗತಿಸಲು ಪ್ರಾರಂಭಿಸಿದ್ದಾರೆ. ಮಕ್ಕಾ ತಲುಪಿದ ಹಜ್ಜಾಜಿಗಳ ಸೇವೆಗಾಗಿ ಮತ್ತು ಆರಂಭಿಕ “ತವಾಫ್” ಅನ್ನು ಸುಸೂತ್ರವಾಗಿ ನಿರ್ವಹಿಸುವ ಸಲುವಾಗಿ 500 ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನೇಮಿಸಲಾಗಿದೆ.

ಪವಿತ್ರ ಹಜ್ಜ್ ಕರ್ಮ ನಿರ್ವಹಣೆಯ ಐದು ದಿನಗಳಲ್ಲಿ ವೈರಸ್ ಹರಡದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದ ವರ್ಷದ ಮಾದರಿಯಲ್ಲೇ ಈ ಬಾರಿಯೂ ಯಶಸ್ವಿಯಾಗಿ ಹಜ್ ಕರ್ಮ ಪೂರೈಸಲು ಸೌದಿ ಸರ್ಕಾರ ಎಲ್ಲಾ ಅಗತ್ಯ ಸಿದ್ಧತೆ ಕೈಗೊಂಡಿದೆ. ಈ ಬಾರಿ ಸಂಪೂರ್ಣ ಲಸಿಕೆ ಹಾಕಿದ 60,000 ಮಂದಿಗೆ ಮಾತ್ರ ಹಜ್ಜ್ ನಿರ್ವಹಿಸಲು ಸೌದಿ ಸರ್ಕಾರ ಅವಕಾಶ ನೀಡಿದೆ.

ಈ ವರ್ಷದ ಹಜ್ ನಲ್ಲಿ ಭಾಗವಹಿಸುವವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಕೋವಿಡ್ ವ್ಯಾಪಕವಾದ ಹಿನ್ನೆಲೆಯಲ್ಲಿ ಕೇವಲ 1000 ಮಂದಿ ಮಾತ್ರ ಹಜ್ಜ್ ನಿರ್ವಹಿಸಿದ್ದರು. ಈ ವರ್ಷದ ಹಜ್ಜ್ ನ ಪ್ರಥಮ ದಿನವಾದ ಅರಫಾವು ಜುಲೈ 20 ಆಗಿದ್ದು, ಜುಲೈ 21 ಕ್ಕೆ ಜಗತ್ತಿನಾದ್ಯಂತ ಮುಸ್ಲಿಮರು ಸಂಭ್ರಮದ ಈದ್ ಆಚರಿಸಲಿದ್ದಾರೆ.

Join Whatsapp
Exit mobile version