Home ಟಾಪ್ ಸುದ್ದಿಗಳು ಒಂದು ತಿಂಗಳಲ್ಲಿ ಆರ್ ಅಂಡ್ ಡಿ ನೀತಿ ಹೊರಬೀಳಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಒಂದು ತಿಂಗಳಲ್ಲಿ ಆರ್ ಅಂಡ್ ಡಿ ನೀತಿ ಹೊರಬೀಳಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ನೂತನ ಆರ್ ಅಂಡ್ ಡಿ ನೀತಿಯನ್ನು ಸರ್ಕಾರ ರೂಪಿಸುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಆರ್ ಅಂಡ್ ಡಿ ನೀತಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ತಜ್ಞ, ಪದ್ಮಭೂಷಣ ಡಾ: ಎಚ್.ನರಸಿಂಹಯ್ಯ ಅವರ 102 ನೇ ಜನ್ಮದಿನಾಚರಣೆ ಅಂಗವಾಗಿ ರೋಬೋಟಿಕ್ಸ್ ಮತ್ತು ಕೃತಕ ಬುದ್ದಿಮತ್ತೆ ಪ್ರಯೋಗಾಲದ ಉದ್ಘಾಟನೆ ಹಾಗೂ ಡಾ: ಹೆಚ್ ನರಸಿಂಹಯ್ಯ ಅವರ ಆತ್ಮಕಥನ ಪಾಥ್ ಆಫ್ ಸ್ಟ್ರಗಲ್ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಗ್ಯಾರೇಜ್ ನಿಂದ ಹಿಡಿದು ದೊಡ್ಡ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಹೊಸ ವಿಚಾರ, ಜ್ಞಾನ ಯಾರಿಗೆ ಬೇಕಾದರೂ ಬರಬಹುದು. ವೈಯಕ್ತಿಕವಾಗಿಯೂ ಸಂಶೋಧನೆ ಮಾಡುವವರಿಗೆ ಪ್ರೋತ್ಸಾಹ ನೀಡಲಾಗುವುದು. ನೀತಿಯ ಸಂಪೂರ್ಣ ಉಪಯೋಗವನ್ನು ನ್ಯಾಷನಲ್ ಶಿಕ್ಷಣ ಸಂಸ್ಥೆ ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಂಸ್ಥೆಯ ಎಲ್ಲಾ ವೈಜ್ಞಾನಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಜೊತೆ ನೀಡಲಿದೆ ಎಂದು ಭರವಸೆ ನೀಡಿದರು.

ಪ್ರಶ್ನೆ ಕೇಳಿ:
ಮಕ್ಕಳು ವಿಷಯದ ಬಗ್ಗೆ ಯಾಕೆ, ಏನು, ಎಲ್ಲಿ ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಆಗ ತಾರ್ಕಿಕ ಚಿಂತನೆ ಬೆಳೆಯುತ್ತದೆ. ತಾರ್ಕಿಕ ಚಿಂತನೆ ಬಂದರೆ ಯಾವುದನ್ನೂ ಬಾಯಿಪಾಠ ಮಾಡುವ ಅವಶ್ಯಕತೆ ಇಲ್ಲ. ಪ್ರಶ್ನೆ ಕೇಳುವ ಅಧಿಕಾರ ಮಕ್ಕಳದ್ದು. ಮಕ್ಕಳ ಕುತೂಹಲವನ್ನು ಉಳಿಸಬೇಕು. ಕುತೂಹಲ ಸಂಶೋಧನೆಗೆ ದಾರಿ. ಈ ಮೂಲವನ್ನಿಟ್ಟುಕೊಂಡು ಕಲಿಕೆಯಾಗಬೇಕು ಎಂದರು.

ನೂತನ ಶಿಕ್ಷಣ ನೀತಿ:
ನೂತನ ಶಿಕ್ಷಣ ನೀತಿಯಲ್ಲಿ ಹೇಳಿರುವುದನ್ನು ನ್ಯಾಷನಲ್ ಶಿಕ್ಷಣ ಸಂಸ್ಥೆ ಜಾರಿಗೆ ತರುತ್ತಿದೆ. ನೂತನ ಶಿಕ್ಷಣ ನೀತಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತಂದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಯೋಗಶೀಲತೆಯನ್ನು ತಂದಿರುವ ಶಿಕ್ಷಣ ನೀತಿ ವಿಜ್ಞಾನಕ್ಕೆ ಮಹತ್ವವನ್ನು ನೀಡಿದೆ. ಸರ್ಕಾರದ ವತಿಯಿಂದ ಪ್ರತಿ ಶಾಲೆಗೆ 50 ಲಕ್ಷ ರೂ.ಗಳ ಮೌಲ್ಯದ ಅಟಲ್ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಸಂಶೋಧನೆಗೆ ಇದರಿಂದ ಅವಕಾಶ ದೊರೆಯಲಿದೆ. ಕರ್ನಾಟಕದಲ್ಲಿ ಈಗಾಗಲೇ ಅಂತಹ ನೂರಾರು ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಿರುವ ಈ ಸಂಸ್ಥೆಗೆ ಮುಂದೆ ಬಹಳ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ ಎಂದರು.

ಕಿವಿಮಾತು
ಕಷ್ಟಪಟ್ಟು ಕೆಲಸ ಮಾಡಿ, ಅಂದಿನ ಕೆಲಸ ಅಂದೇ ಮಾಡಿ, ಶ್ರದ್ಧೆಯಿಂದ ಓದಿ, ಇವಿಷ್ಟನ್ನು ಮಾಡಿದರೆ ನಿಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸುಸಂಸ್ಕತ, ವಿಜ್ಞಾನ ಸಂಸ್ಕಾರವುಳ್ಳ ಅಪರೂಪದ ಸಂಸ್ಥೆ
ನ್ಯಾಷನಲ್ ಕಾಲೇಜು ಇತಿಹಾಸ ನಿರ್ಮಿಸಿರುವ ಶಿಕ್ಷಣ ಸಂಸ್ಥೆ. ಸುಸಂಸ್ಕøತ, ವಿಜ್ಞಾನ ಸಂಸ್ಕಾರವುಳ್ಳ ಅಪರೂಪದ ಸಂಸ್ಥೆ. ಆಧುನಿಕ ಕಾಲದಲ್ಲಿ ತಮ್ಮ ವ್ಯಕ್ತಿತ್ವ, ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಬೆಂಗಳೂರು ಸ್ವರಾಜ್ಯದ ಜೊತೆ ಸುರಾಜ್ಯ ನಿರ್ಮಿಸಬೇಕೆನ್ನುವ ಮಹಾತ್ಮಾ ಗಾಂಧಿಯವರ ಆಶಯವನ್ನು ಸಾಕಾರ ಮಾಡಲು ಅಕ್ಷರಶ: ಶ್ರಮಿಸಿದೆ. ಗಾಂಧಿಯವರ ಗುಣಧರ್ಮವನ್ನು ನ್ಯಾಷನಲ್ ಎಜುಕೇಷನ್ ಸಂಸ್ಥೆಗಳಲ್ಲಿ ಕಾಣಬಹುದಾಗಿದೆ ಎಂದರು.

ಈ ದೇಶದ ಸನಾತನ ಮೌಲ್ಯಗಳನ್ನು ಉಳಿಸಿಕೊಂಡು, ಆಧುನಿಕ ಭಾರತ ನಿರ್ಮಾಣ ಮಾಡುವ ಕೆಲಸವನ್ನು ನರಸಿಂಹಯ್ಯನವರು ಮಾಡಿದರು. ವೈಜ್ಞಾನಿಕ ಮನೋಭಾವ, ವಿಚಾರವಾದಿಯಾಗಿದ್ದ ಅವರು ಮೂಢ ನಂಬಿಕೆಗಳ ವಿರುದ್ಧ ಹೋರಾಡಿದವರು. ಮೂಢನಂಬಿಕೆ ಯಾವ ರೀತಿ ನಮ್ಮ ಬದುಕಿನ ದಾರಿ ತಪ್ಪಿಸಿದೆ ಎಂದು ನಿರೂಪಿಸಿದರು. 70 ರ ದಶಕಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಭಾನಾಮತಿ ವಿರುದ್ಧ ದೊಡ್ಡ ದನಿಯಾಗಿ ಹೋರಾಟ ಮಾಡಿ, ಜನರಿಗೆ ಧೈರ್ಯ ತುಂಬಿ, ರೈತರ, ಬಡವರ ಬದುಕಿನಲ್ಲಿ ನೆಮ್ಮದಿಯನ್ನು ತದುಕೊಟ್ಟವರು. ಹಲವಾರು ವಿಚಾರಗಳಲ್ಲಿ ಅವರ ನಿಲುವುಗಳು ಅಂದಿನ ಸಮಾಜವನ್ನು ಮೂಢನಂಬಿಕೆಯಿಂದ ದೂರ ಮಾಡಿ ಕರ್ನಾಟವನ್ನು ವೈಜ್ಞಾನಿಕವಾಗಿ ಚಿಂತಿಸುವ ಸಮಾಜವನ್ನಾಗಿ ಪರಿವರ್ತನೆ ಮಾಡಿದ್ದು ನರಸಿಂಹಯ್ಯನವರು. ಕೇವಲ ಮಾತಿನಲ್ಲಿ ಅಲ್ಲದೆ, ಕೃತಿಯಲ್ಲಿಯೂ ಮಹಾನ್ ವ್ಯಕ್ತಿಯಾಗಿದ್ದರಿಂದ ಭವ್ಯವಾದ ವಿದ್ಯಾಮಂದಿರ ಬೆಂಗಳೂರಿನಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ವಿದ್ಯಾಭ್ಯಾಸ ಮಾಡುವವರೆಲ್ಲರೂ ಪುಣ್ಯಶಾಲಿಗಳು ಎಂದರು.

ಡಾ:ಎ.ಹೆಚ್.ರಾಮರಾವ್ ಅವರು ಸಂಸ್ಥೆಯನ್ನು ದಕ್ಷತೆಯಿಂದ ಹೆಚ್.ನರಸಿಂಹಯ್ಯನವರ ದಾರಿಯಲ್ಲಿ ದಕ್ಷತೆಯಿಂದ ನಡೆಸುತ್ತಿದಾರೆ. ಇಡೀ ದೇಶಕ್ಕೇ ಮಾದರಿಯಾಗಿ ಈ ಸಂಸ್ಥೆ ನಿಂತಿದೆ. ಕರ್ನಾಟಕಕ್ಕೆ ಇದು ಹೆಮ್ಮೆ ಎಂದರು. ರೋಬೊಟಿಕ್ಸ್ ಮತ್ತು ಕೃತಕ ಬುದ್ದಿಮತ್ತೆಯ ಬಳಕೆ ಮಾಡುವ ಅವಕಾಶವನ್ನು ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿದೆ ಎಂದರು.

Join Whatsapp
Exit mobile version