Home ಟಾಪ್ ಸುದ್ದಿಗಳು ACB ದಾಳಿ| ಆದಾಯಕ್ಕಿಂತ 1434 ಪಟ್ಟು ಅಕ್ರಮ ಆಸ್ತಿ ಗಳಿಸಿದ್ದ ವಾಸುದೇವ್ ಜೈಲಿಗೆ

ACB ದಾಳಿ| ಆದಾಯಕ್ಕಿಂತ 1434 ಪಟ್ಟು ಅಕ್ರಮ ಆಸ್ತಿ ಗಳಿಸಿದ್ದ ವಾಸುದೇವ್ ಜೈಲಿಗೆ

ಬೆಂಗಳೂರು: ಆದಾಯ ಮೀರಿ ಸಾವಿರಾರು ಪಟ್ಟು ಅಕ್ರಮ ಆಸ್ತಿ ಗಳಿಸಿರುವ ಭ್ರಷ್ಟಾಚಾರ ಆರೋಪದಡಿ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ವಾಸುದೇವ್ ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.


ಅತಿ ಹೆಚ್ಚು ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ಕೂಡ ವಾಸುದೇವ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರಲಿಲ್ಲ. ಹೀಗಾಗಿ, ತನಿಖೆಗೆ ಸಹಕಾರ ನೀಡದ ಹಿನ್ನಲೆ ಹಾಗೂ ಭ್ರಷ್ಟಾಚಾರ ಆರೋಪದಡಿ ನಿನ್ನೆ ರಾತ್ರಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.


ವಾಸುದೇವ್ ಅವರು ಪತ್ನಿ, ಮಕ್ಕಳು ಹಾಗೂ ತನ್ನ ಹೆಸರಿನಲ್ಲಿ ಕೋಟ್ಯಾಂತರ ರೂ. ಆಸ್ತಿ ಮಾಡಿದ್ದು, ಬೇನಾಮಿಯಲ್ಲಿ ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೀಗಾಗಿ, ನಾಳೆ ಕುಟುಂಬಸ್ಥರ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್ ಎನ್ ವಾಸುದೇವ್ ನಗರವಲ್ಲದೆ ಹೊರವಲಯದಲ್ಲೂ ಕೋಟಿ ಗಟ್ಟಲೆ ಆಸ್ತಿ ಮಾಡಿರುವುದು ಪತ್ತೆಯಾಗಿದೆ.


ನಗರದಲ್ಲಿ ಐದು ಕಟ್ಟಡಗಳಲ್ಲಿರುವ 28 ಮನೆಗಳನ್ನು ಬಾಡಿಗೆಗೆ ಬಿಟ್ಟಿದ್ದು ಸಂಪಾದನೆಯ ಆದಾಯಕ್ಕಿಂತ ಶೇ.1434 ಅಧಿಕ ಆಸ್ತಿ ಹೊಂದಿರುವ ವಾಸುದೇವ್ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ.
ಕೆಂಗೇರಿ ಉಪನಗರ, ಮಲ್ಲೇಶ್ವರ, ನೆಲಮಂಗಲ ಸಿದ್ದಗಂಗಾ ಲೇಔಟ್, ಸೋಂಪುರ ಗ್ರಾಮ, ಹೆಸರಘಟ್ಟ, ಕೆಂಗೇರಿಯ ಸೂಲಿಗೆರೆ, ಅರ್ಕಾವತಿ ಲೇಔಟ್, ಯಲಹಂಕ, ಜ್ಞಾನಭಾರತಿ ಬಿಡಿಎ ಸೈಟ್, ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್, ಹೊಸಕೆರೆಹಳ್ಳಿ ಸೇರಿದಂತೆ 16 ಕಡೆಗಳಲ್ಲಿ ನಿವೇಶನ ಹೊಂದಿರುವುದು ಪತ್ತೆಯಾಗಿದೆ.


ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ ರೂ.25.78 ಕೋಟಿ ಹಾಗೂ ಚರಾಸ್ಥಿ ಮೌಲ್ಯ ಅಂದಾಜು ರೂ. 3.87 ಕೋಟಿಯಾಗಿದೆ. ಆರೋಪಿತನ ಒಟ್ಟು ಆಸ್ತಿಯು 30.60 ಕೋಟಿಯಾಗಿದೆ. ಈ ಪೈಕಿ 29.15 ಕೋಟಿ ಅಕ್ರಮ ಆಸ್ತಿಯ ಪ್ರಮಾಣವು ಶೇ.1408 ರಷ್ಟಾಗಿದೆ. ಆರೋಪಿತರ ಬಳಿ ಇನ್ನು ಹೆಚ್ಚಿನ ಅಕ್ರಮ ಆಸ್ತಿಯು ಕಂಡು ಬರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆಸಲಾಗಿದೆ.
ಅಕ್ರಮ ಆಸ್ತಿ ಸಂಬಂಧ ಕೆಲ ಅಧಿಕಾರಿಗಳ ಸೂಕ್ತ ದಾಖಲೆಗಳ ಸಲ್ಲಿಕೆಗೆ ಸೂಚಿಸಲಾಗಿದೆ. ಈ ನಡುವೆ ಮುಂದಿನ ಕಾನೂನು ಕ್ರಮಕ್ಕೆ ಎಸಿಬಿ ಅಧಿಕಾರಿಗಳು ತಜ್ಞರ ಸಲಹೆ ಪಡೆದಿದ್ದಾರೆ.

Join Whatsapp
Exit mobile version