ಬೆಂಗಳೂರು: ನಗರದಲ್ಲಿ ಡ್ರಗ್ಸ್ ಸೇವನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಜನರ ಮೊಬೈಲ್ ಪಡೆದು ಫೋನ್ ಗಳಲ್ಲಿರುವ ಗ್ಯಾಲರಿಗೆ ಇಣುಕಿ ಖಾಸಗಿ ಚಿತ್ರ, ವಿಡಿಯೊಗಳನ್ನೂ ನೋಡುತ್ತಿರುವ ಬಗ್ಗೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಇದನ್ನು ತಡೆಯಲು ಸ್ವತ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಂದಾಗಿದ್ದಾರೆ.
ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಕಮಲ್ ಪಂತ್, ‘ಯಾರೊಬ್ಬರ ಫೋನ್ ಕಸಿದುಕೊಳ್ಳಲು ಯಾವುದೇ ಸಂದರ್ಭದಲ್ಲಿ ಅನುಮತಿ ಇಲ್ಲ. ಇಂಥ ಕಾರ್ಯಗಳನ್ನು ಒಪ್ಪಲು ಸಾಧ್ಯವಿಲ್ಲ. ನಿಮಗೆ ಈ ರೀತಿ ಅನುಭವವಾದರೆ ತಕ್ಷಣ ವಿವರಗಳನ್ನು ಡೈರೆಕ್ಟ್ ಮೆಸೇಜ್ ಮೂಲಕ ಶೇರ್ ಮಾಡಿ’ ಎಂದು ವಿನಂತಿಸಿದ್ದಾರೆ.
ಮತ್ತೊಂದು ಟ್ವೀಟ್’ನಲ್ಲಿ, ಯಾವುದೇ ಪೊಲೀಸ್ ಸಿಬ್ಬಂದಿ ನಿಮ್ಮ ಮೊಬೈಲ್ ಕಸಿದುಕೊಂಡರೆ 112 ಅಥವಾ 080 2294 2215 ಸಂಖ್ಯೆಗೆ ಕರೆ ಮಾಡಿ ಆಯುಕ್ತರಿಗೆ ದೂರು ಕೊಡಿ ಎಂದು ಸೂಚನೆ ನೀಡಿದ್ದಾರೆ. ದೂರು ಕೊಡುವ ದೂರುದಾರರ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು. ದೂರು ಕೊಡುವಾಗ ಸ್ಥಳ ಮತ್ತು ಸಮಯದ ವಿವರವನ್ನು ತಪ್ಪದೇ ನಮೂದಿಸಿ ಎಂದು ಕಮಲ್ ಪಂತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗಸ್ತು ತಿರುಗುವ ಪೊಲೀಸರು ಜನರನ್ನು ಬೆದರಿಸಿ, ಅವರಿಂದ ಮೊಬೈಲ್ಗಳನ್ನು ಕಸಿದುಕೊಂಡು ವಾಟ್ಸ್ಯಾಪ್ ಚಾಟ್ ಪರಿಶೀಲಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದೂರಿದ್ದಾಗಿ ನ್ಯೂಸ್ಲಾಂಡ್ರಿ ಜಾಲತಾಣ ಸುದ್ದಿಯನ್ನು ಪ್ರಕಟಿಸಿತ್ತು.