Home ಟಾಪ್ ಸುದ್ದಿಗಳು ಪಕ್ಷ ಅಂದರೆ ಒಂದು ರೀತಿ-ನೀತಿ ಇರಬೇಕು; ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದ ಮುಖ್ಯಮಂತ್ರಿ ಚಂದ್ರು

ಪಕ್ಷ ಅಂದರೆ ಒಂದು ರೀತಿ-ನೀತಿ ಇರಬೇಕು; ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದ ಮುಖ್ಯಮಂತ್ರಿ ಚಂದ್ರು

ಬೆಂಗಳೂರು:  ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಂಡಲ್ವುಡ್ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಹೈಕಮಾಂಡ್ ಕೂಡಾ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಅನ್ನಿಸುತ್ತೆ. ರಾಜ್ಯದಲ್ಲಿ  ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿರುವವರು ತಮಗೆ ಇಷ್ಟ ಬಂದಂತೆ ತೀರ್ಮಾನ ತೆಗೆದುಕೊಳ್ಳುವ ನಡೆ ಇಷ್ಟವಾಗಲಿಲ್ಲ. ಪಕ್ಷ ಅಂದ್ರೆ ಒಂದು ರೀತಿ-ನೀತಿ ಇರುತ್ತೆ. ಪಕ್ಷದ ಉದ್ದೇಶ ಏನು ಎಂಬುದನ್ನು ಮೊದಲು ಅರಿತು ಪಾಲಿಸಬೇಕು.  ರಾಜ್ಯ ನಾಯಕರಿಬ್ಬರಲ್ಲೂ ಹೊಂದಾಣಿಕೆ ಇಲ್ಲ. ನಾನು ಮುಖ್ಯಮಂತ್ರಿ ಆಗ್ಬೇಕಾ? ನೀನು ಮುಖ್ಯಮಂತ್ರಿ ಆಗ್ಬೇಕಾ ಅಂತ ಕಿತ್ತಾಟ ಇದೆ. 2 ಬಾರಿ ಎಂಎಲ್ಸಿ ಸ್ಥಾನಕ್ಕೆ ನನ್ನ ಹೆಸರು ಅಪ್ರೂವಲ್ ಆಗಿದ್ದರೂ ಅವಕಾಶ ಸಿಗಲಿಲ್ಲ. ಹಣ-ಜಾತಿಯೇ ಮುಖ್ಯ ಎಂದಾದರೆ ಹೇಗೆ ಇರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲೂ ಒಂದಿಲ್ಲೊಂದು ಕಾರಣಕ್ಕೆ ವಿವಾದ, ಹಗರಣ ಸದ್ದು ಮಾಡುತ್ತಲೇ ಇದೆ. ಮಂತ್ರಿಗಳಲ್ಲೇ ಹೊಂದಾಣಿಕೆ ಇಲ್ಲ.  40 ಶೇ. ಕಮಿಷನ್, ವರ್ಗಾವಣೆ ದಂಧೆ ನಡೆಯುತ್ತಿದ್ದು, ಮುಖ್ಯಮಂತ್ರಿಗಳಿಗೆ ಇದೆಲ್ಲವನ್ನೂ ನಿಭಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್ಎಸ್ಎಸ್ನ ಒತ್ತಡ, ಜಾತಿ ಒತ್ತಡ, ಮುಖಂಡರ ಒತ್ತಡ ಹೆಚ್ಚುತ್ತಿದೆ.  ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಎಲ್ಲಿಗೆ ಬಂದು ನಿಂತಿದೆ? ಆ ಮಂತ್ರಿಗೂ ಬುದ್ಧಿ ಇಲ್ಲ… ಇದೆಲ್ಲವನ್ನೂ ವಿರೋಧಿಸಿ ಕಾಂಗ್ರೆಸ್ ಪಕ್ಷದವರು ಹೋರಾಟ ರೂಪಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಪ್ಪುಗಳನ್ನು ಸಮರ್ಥಿಸಿಕೊಂಡು ನಾನು ಭಾಷಣ ಮಾತಾಡಲು ಸಿದ್ಧವಿಲ್ಲ. ರಾಜಕೀಯದಲ್ಲಿ ನಾನೇನು ಸನ್ಯಾಸಿಯಲ್ಲ. ಮೂರು ಪಕ್ಷಗಳ ತಪ್ಪುಗಳನ್ನು ಎತ್ತಿಹಿಡಿಯುವ ಕೆಲಸ ಮಾಡುವೆ. ಈ ಮೂರಕ್ಕೂ ಪರ್ಯಾಯ ವ್ಯವಸ್ಥೆ ಬೇಕಿದೆ ಎಂದು ಜಾಗೃತಿ ಮೂಡಿಸುವ ಚಿಂತನೆ ನನ್ನದು. ಜಾತಿ-ಪಕ್ಷ ಮುಖ್ಯವಲ್ಲ, ಉತ್ತಮ ಅಭ್ಯರ್ಥಿ ನೋಡಿ ಮತ ಹಾಕಿ ಎಂದು ಹೇಳಿದರು.

Join Whatsapp
Exit mobile version