ಮುಂಬೈ: ಐಪಿಎಲ್ ನ 15ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ಭಾನುವಾರ ಮುಂಬೈನಲ್ಲಿ ತೆರೆಬಿದ್ದಿದೆ. ಗುಂಪು ಹಂತದಲ್ಲಿ ಸ್ಪರ್ಧೆಯಲ್ಲಿದ್ದ ಒಟ್ಟು 10 ತಂಡಗಳಲ್ಲಿ ಇದೀಗ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಈ ಬಾರಿಯ ಐಪಿಎಲ್ ನಲ್ಲಿ ನಿರೀಕ್ಷೆಯಂತೆಯೇ ರನ್ ಗಳ ಹೊಳೆಯೇ ಹರಿದಿದೆ. ಒಟ್ಟು 70 ಪಂದ್ಯಗಳಲ್ಲಿ 1001 ಸಿಕ್ಸರ್ ಗಳು ದಾಖಲಾಗಿರುವುದೇ ಇದಕ್ಕೆ ಸಾಕ್ಷಿ. 2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಇದೇ ಮೊತ್ತಮೊದಲ ಬಾರಿಗೆ 1000 ಸಿಕ್ಸರ್ ದಾಖಲಾಗಿದೆ. ಕೂಟ ಮುಗಿಯಲು ಇನ್ನೂ ನಾಲ್ಕು ಪಂದ್ಯಗಳು ಬಾಕಿಯಿವೆ !
15ನೇ ಆವೃತ್ತಿಯ ಐಪಿಎಲ್ ನಲ್ಲಿ, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ನಿರ್ಮಿಸಿದೆ. 14 ಪಂದ್ಯಗಳನ್ನಾಡಿರುವ ರಾಜಸ್ಥಾನದ ಬ್ಯಾಟ್ಸ್ ಮ್ಯಾನ್ ಗಳು, ಒಟ್ಟು 116 ಬಾರಿ ಚೆಂಡನ್ನು ನೇರವಾಗಿ ಬೌಂಡರಿ ಗೆರೆ ದಾಟಿಸಿದ್ದಾರೆ. 113 ಸಿಕ್ಸರ್ ಗಳೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ 110 ಸಿಕ್ಸರ್ ಗಳನ್ನು ದಾಖಲಿಸಿರುವ ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ.
ವಿಶೇಷವೆಂದರೆ, ಸಿಕ್ಸರ್ ಗಳ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ (69), ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಮೊದಲ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. 34 ಸಿಕ್ಸರ್ ಗಳನ್ನು ಸಿಡಿಸಿರುವ ಪಂಜಾಬ್ ಕಿಂಗ್ಸ್ ತಂಡದ ಲಿಯಾಮ್ ಲಿವಿಂಗ್ಸ್ಟನ್, ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿ ಬೌಲರ್ ಮುಹಮ್ಮದ್ ಶಮಿ ಎಸೆತವನ್ನು 117 ಮೀಟರ್ ದೂರದಲ್ಲಿ ಸಿಕ್ಸರ್ ಗೆ ಅಟ್ಟಿದ್ದ ಲಿಯಾಮ್ ಲಿವಿಂಗ್ಸ್ಟನ್, ʻಲಾಂಗೆಸ್ಟ್ ಸಿಕ್ಸ್ʼ ದಾಖಲೆಯನ್ನೂ ಹೊಂದಿದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ನ ಟಿಮ್ ಡೇವಿಡ್ (114 ಮೀಟರ್) ಮತ್ತುಡಿವಾಲ್ಡ್ ಬ್ರೇವಿಸ್ (112) ಸ್ಥಾನ ಪಡೆದಿದ್ದಾರೆ.
ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ತಂಡಗಳು
116 – ರಾಜಸ್ಥಾನ್ ರಾಯಲ್ಸ್
113 – ಕೆಕೆಆರ್
110 – ಪಂಜಾಬ್ ಕಿಂಗ್ಸ್
106 – ಡೆಲ್ಲಿ ಕ್ಯಾಪಿಟಲ್ಸ್
103 – ಚೆನ್ನೈ ಸೂಪರ್ ಕಿಂಗ್ಸ್
101 – ಲಕ್ನೋ ಸೂಪರ್ ಜೈಂಟ್ಸ್
100 – ಮುಂಬೈ ಇಂಡಿಯನ್ಸ್
97 – ಸನ್ ರೈಸರ್ಸ್ ಹೈದರಾಬಾದ್
86 – ರಾಯಲ್ ಚಾಲೆಂಜರ್ಸ್ ಬೆಂಗಳೂರು
69 – ಗುಜರಾತ್ ಟೈಟನ್ಸ್
14 ಬಾರಿ 200ರ ಗಡಿ ದಾಟಿದ 7 ತಂಡಗಳು
ಲೀಗ್ ಹಂತದ 70 ಪಂದ್ಯಗಳಲ್ಲಿ ಒಟ್ಟು 14 ಬಾರಿ 7 ತಂಡಗಳು 200+ ಮೊತ್ತವನ್ನು ದಾಖಲಸಿದೆ. ಅತಿಹೆಚ್ಚಿನ ಮೊತ್ತ ಗಳಿಸಿದ ಮೊದಲೆರಡು ಸ್ಥಾನದಲ್ಲಿ ರಾಜಸ್ಥಾನ ರಾಯಲ್ ತಂಡದ ಹೆಸರಿದೆ. ಏಪ್ರಿಲ್ 22ರಂದು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ್ದ ರಾಜಸ್ತಾನ ರಾಯಲ್ಸ್ 2 ವಿಕೆಟ್ ನಷ್ಟದಲ್ಲಿ 222 ರನ್ಗಳಿಸಿತ್ತು. ಇದು ಲೀಗ್ ಹಂತದಲ್ಲಿ ದಾಖಲಾದ ಅತಿಹೆಚ್ಚಿನ ಮೊತ್ತವಾಗಿದೆ. ಏಪ್ರಿಲ್ 18ರಂದು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ 5 ವಿಕೆಟ್ ನಷ್ಟದಲ್ಲಿ 217 ರನ್ ಗಳಿಸಿತ್ತು. ಆರ್ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗಳಿಸಿದ 216 ರನ್ ಮೂರನೇ ಸ್ಥಾನದಲ್ಲಿದೆ.
ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತಿಹೆಚ್ಚು (4) ಬಾರಿ 200+ ರನ್ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಲಾ 3 ಬಾರಿ, ಲಕ್ನೋ ಸೂಪರ್ ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಲಾ 3 ಬಾರಿ 200+ರನ್ ದಾಖಲಿಸಿದೆ. ಕೊನೆಯ ತಂಡವಾಗಿ ಪ್ಲೇ ಆಫ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿ 200ರ ಗಡಿ ದಾಟಿದೆ. ಆದರೆ 14 ಪಂದ್ಯಗಳಲ್ಲಿ 20 ಅಂಕಗಳಿಸಿರುವ ಏಕೈಕ ತಂಡ ಗುಜರಾತ್ ಟೈಟನ್ಸ್ ಒಮ್ಮೆಯೂ ದ್ವಿಶತಕದ ಮೊತ್ತ ದಾಖಲಿಸಿಲ್ಲ. ಉಳಿದಂತೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.