Home ರಾಷ್ಟ್ರೀಯ ಸುಪ್ರೀಂ ಕೋರ್ಟ್ ನೂತನ ಸಿಜೆಐ ನ್ಯಾ. ಸಂಜೀವ್ ಖನ್ನಾ ಹಿನ್ನೆಲೆ ಏನು?

ಸುಪ್ರೀಂ ಕೋರ್ಟ್ ನೂತನ ಸಿಜೆಐ ನ್ಯಾ. ಸಂಜೀವ್ ಖನ್ನಾ ಹಿನ್ನೆಲೆ ಏನು?

ಭಾರತದ ಸುಪ್ರೀಂ ಕೋರ್ಟ್ ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಮುಂದಿನ ಏಳು ತಿಂಗಳ ಅವಧಿಗೆ 64 ವರ್ಷದ ಸಂಜೀವ್ ಖನ್ನಾ ಅವರು 2024ರ ನವೆಂಬರ್ ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಿರಿತನದ ನಿಯಮದ ಆಧಾರದಲ್ಲಿ ಇವರಿಗೆ ಈ ಅಧಿಕಾರ ಪ್ರಾಪ್ತಿಯಾಗಲಿದೆ.


ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿರುವ ಡಿ.ವೈ. ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದು, ಇವರ ಸ್ಥಾನಕ್ಕೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೇಮಕಗೊಂಡಿದ್ದಾರೆ.


ಇವರ ಶಿಕ್ಷಣದ ಹಿನ್ನೆಲೆ
1960ರ ಮೇ 14ರಂದು ದೆಹಲಿ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿಯಾದ ದೇವ್ ರಾಜ್ ಖನ್ನಾ ಅವರ ಮಗನಾಗಿ ಜನಿಸಿದ ಸಂಜೀವ್ ಖನ್ನಾ ದೆಹಲಿಯ ಪ್ರತಿಷ್ಠಿತ ಮಾಡರ್ನ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.


1980ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಅನಂತರ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.


ಸಂಜೀವ್ ಖನ್ನಾ ಅವರು 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ಸೇರಿಕೊಂಡು ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ ದೆಹಲಿಯ ತೀಸ್ ಹಜಾರಿಯಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದರು. ಅನಂತರ ದೆಹಲಿ ಹೈಕೋರ್ಟ್ ಸೇರಿದರು.


ಸಾಂವಿಧಾನಿಕ ಕಾನೂನು, ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ವಿಷಯಗಳಲ್ಲಿ ಪರಿಣತಿ ಪಡೆದ ಅವರು ಸುಮಾರು ಏಳು ವರ್ಷಗಳ ಕಾಲ ದೆಹಲಿ ಹೈಕೋರ್ಟ್ನಲ್ಲಿ ಆದಾಯ ತೆರಿಗೆ ಇಲಾಖೆಯ ಹಿರಿಯ ದರ್ಜೆಯ ವಕೀಲರಾಗಿದ್ದರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದರು. 2004ರಲ್ಲಿ ದೆಹಲಿ ಹೈಕೋರ್ಟ್ನಲ್ಲಿ ದೆಹಲಿ ಸರ್ಕಾರದ ಸಲಹೆಗಾರರಾಗಿ (ಸಿವಿಲ್) ನೇಮಕಗೊಂಡರು.


2005ರ ಜೂನ್ 24ರಂದು ದೆಹಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಆಯ್ಕೆಗೊಂಡ ಹಲವಾರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ವಾದಿಸಿದ್ದಾರೆ. ಬಳಿಕ 2006ರ ಫೆಬ್ರವರಿ 20ರಂದು ದೆಹಲಿ ಹೈಕೋರ್ಟ್ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. 2018ರ ಡಿಸೆಂಬರ್ 12ರಂದು ಆಗಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ರಂಜನ್ ಗೊಗೊಯ್ ಅವರ ನೇತೃತ್ವದ ಐದು ಸದಸ್ಯರ ಸಮಿತಿ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ಗೆ ನೇಮಕ ಮಾಡಲು ಶಿಫಾರಸು ಮಾಡಿತು. 2019ರ ಜನವರಿ 18ರಂದು ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಖನ್ನಾ ಅವರನ್ನು ನೇಮಕ ಮಾಡಲಾಗಿದ್ದು, ಇವರು 2025ರ ಮೇ 13ರಂದು ನಿವೃತ್ತರಾಗಲಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಖನ್ನಾ ಅವರು ವಿದ್ಯುನ್ಮಾನ ಮತಯಂತ್ರಗಳಾದ ಇವಿಎಂಗಳಲ್ಲಿ ವಿವಿಪ್ಯಾಟ್ ಮೂಲಕ ಚಲಾವಣೆಯಾದ ಮತಗಳ ಮರು ಪರಿಶೀಲನೆಗೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ್ದರು. ಅಲ್ಲದೇ ಚುನಾವಣಾ ಬಾಂಡ್ಗಳಿಗೆ ಸಾಂವಿಧಾನಿಕ ಸಿಂಧುತ್ವ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಪೀಠದಲ್ಲಿ ಖನ್ನಾ ಅವರೂ ಇದ್ದರು.

Join Whatsapp
Exit mobile version