ಮಂಗಳೂರು: ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಮಧ್ಯೆ ಲೈನ್ ಮ್ಯಾನ್ ಒಬ್ಬರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಭಾರೀ ಮಳೆಗೆ ವಿದ್ಯುತ್ ಕೈಕೊಟ್ಟು 40 ರಷ್ಟು ಮನೆಗಳಿಗೆ ಕರೆಂಟ್ ಇಲ್ಲದಾಗಿತ್ತು. ಈ ವಿಚಾರವನ್ನು ನಿವಾಸಿಗಳು ಸ್ಥಳೀಯ ಲೈನ್ ಮ್ಯಾನ್ ಒಬ್ಬರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಮೆಸ್ಕಾಂನ ಪವರ್ ಮೆನ್ ವಸಂತ್ ಹಾಗೂ ಸುರೇಶ್ ಎಂಬವರು ಭೇಟಿ ನೀಡಿದ್ದಾರೆ.ಆದರೆ ಟ್ರಿಪ್ ಆಗಿದ್ದ ವಿದ್ಯುತ್ ಕಂಬವು ನೆರೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಗದ್ದೆಯಲ್ಲಿರುವ ನೆರೆ ನೀರನ್ನು ಲೆಕ್ಕಿಸದ ಸಿಬ್ಬಂದಿ ಸ್ಥಳೀಯರೋರ್ವರ ಮಾರ್ಗದರ್ಶನದಿಂದ ನೀರಲ್ಲಿ ಮುಳುಗಿ ಒದ್ದೆಯಾಗಿಯೇ ಸಾಗಿ ಕಂಬವನ್ನೇರಿ ತುರ್ತು ದುರಸ್ಥಿ ಕಾರ್ಯ ನಡೆಸಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹಲವು ವರ್ಷಗಳಿಂದ ಮೆಸ್ಕಾಂ ನಲ್ಲಿ ಸೇವೆಸಲ್ಲಿಸುತ್ತಿರುವ ವಸಂತ್ ತಮ್ಮ ಪ್ರಾಮಾಣಿಕತೆಯ ಸೇವೆಗೆ ಸಂಸ್ಥೆ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದವರಾಗಿದ್ದಾರೆ.
ದೇರಳಕಟ್ಟೆಯ ಬೆರಿಕೆ ಎಂಬಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಟ್ರಿಪ್ ಆಗಿ ಸ್ಥಳೀಯರಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು ಸ್ಥಳಕ್ಕೆ ಬಂದ ಮೆಸ್ಕಾಂ ಪವರ್ ಮೆನ್ ನೆರೆ ನೀರಲ್ಲಿ ಮುಳುಗಿ ಕಂಬವನ್ನೇರಿ ತುರ್ತು ದುರಸ್ಥಿ ಕಾರ್ಯ ನಡೆಸಿದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. pic.twitter.com/r9NcinX5YE
— Jafar Swadiq (@JafarSwadiq3) July 5, 2023