Home ಟಾಪ್ ಸುದ್ದಿಗಳು ಟಿಪ್ಪು ಬಗ್ಗೆ ಅರಿಯದಿದ್ದರೆ ಭವಿಷ್ಯವನ್ನು ಅರ್ಥಪೂರ್ಣವಾಗಿ ಕಲ್ಪಿಸಿಕೊಳ್ಳಲೂ ಅಸಾಧ್ಯ: ಡಾ. ಸುಜಯ್ ಕುಮಾರ್

ಟಿಪ್ಪು ಬಗ್ಗೆ ಅರಿಯದಿದ್ದರೆ ಭವಿಷ್ಯವನ್ನು ಅರ್ಥಪೂರ್ಣವಾಗಿ ಕಲ್ಪಿಸಿಕೊಳ್ಳಲೂ ಅಸಾಧ್ಯ: ಡಾ. ಸುಜಯ್ ಕುಮಾರ್

► ಮೈಸೂರಿನಲ್ಲಿ ಮೂರು ದಿನಗಳ ಟಿಪ್ಪು ಚರಿತ್ರೆಯ ಅನಾವರಣ, ವಸ್ತುಪ್ರದರ್ಶನಕ್ಕೆ ತೆರೆ  

ಮೈಸೂರು: ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿದೆ. ಹಾಗೆಯೇ ಟಿಪ್ಪುವಿನ ಕುರಿತು ನಾವು ಹೆಚ್ಚು ತಿಳಿಯದಿದ್ದರೆ, ನಮ್ಮ ಭವಿಷ್ಯವನ್ನು ನಮಗೆ ಅರ್ಥಪೂರ್ಣವಾಗಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಸಾಮಾಜಿಕ ಚಿಂತಕ ಡಾ. ಸುಜಯ್ ಕುಮಾರ್ ಹೇಳಿದ್ದಾರೆ.

ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆ ವತಿಯಿಂದ ಮಹಾನ್ ಮಾನವತಾವಾದಿ ಹಝ್ರತ್ ಟಿಪ್ಪು ಸುಲ್ತಾನ್ ರವರ ಇತಿಹಾಸದ ಅನಾವರಣ ಕಾರ್ಯಕ್ರಮದ ಪ್ರಯುಕ್ತ ಆಗಸ್ಟ್ 7ರಂದು ಶ್ರೀರಂಗಪಟ್ಟಣದ ಟಿಪ್ಪು ಗುಂಬಝ್ ಮುಂಭಾಗದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಬ್ರಿಟಿಷರು ಜಗತ್ತಿನ ಬಹುಭಾಗದಲ್ಲಿ ತಮ್ಮ ಆಧಿಪತ್ಯ ಸಾಧಿಸಿದ್ದರು. ಅಂತಹ ಬಲಿಷ್ಠ ಸೇನೆ ಹೆದರಿದ್ದು ಮಾತ್ರ ಟಿಪ್ಪುಗೆ. ಟಿಪ್ಪುವಿನ ವೀರಾವೇಶಕ್ಕೆ ಈಸ್ಟ್ ಇಂಡಿಯಾ ಕಂಪೆನಿಯೇ ಬೆವತುಹೋಗಿತ್ತು. ತನ್ನ ಬದುಕಿನ ಕೊನೆಕ್ಷಣದಲ್ಲೂ ಆತ ಬ್ರಿಟಿಷರಿಗೆ ತಲೆಬಾಗದೇ ಶೌರ್ಯ ಪ್ರದರ್ಶಿಸಿದರು. ಈ ಸನ್ನಿವೇಶವನ್ನು ದಿಲ್ಲಿಯ ಆರ್ಟ್ ಗ್ಯಾಲರಿಯಲ್ಲಿ ಇತ್ತೀಚಿಗೆ ಆಯೋಜಿಸಲಾದ ವಸ್ತು ಪ್ರದರ್ಶನದಲ್ಲಿ ಇಡಲಾದ ಸ್ವತಃ ಬ್ರಿಟಿಷ್ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಕಲಾಕೃತಿಯು ಅದ್ಭುತವಾಗಿ ವರ್ಣಿಸುತ್ತದೆ ಎಂದು ಸುಜಯ್ ಕುಮಾರ್ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಟಿಪ್ಪು ಸುಲ್ತಾನ್ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಆದರೂ ಅವರು ಆ ಕಾಲದಲ್ಲಿಯೇ ಭಾರತದ ಸಂವಿಧಾನ ಆಶಯಗಳಾದ ಬಹು ಸಂಸ್ಕೃತಿ, ಧರ್ಮ ನಿರಪೇಕ್ಷತೆ ಮತ್ತು ಸರ್ವ ಜನರ ಅಭಿವೃದ್ಧಿಯ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದ್ದರು. ಧರ್ಮಗಳ ನಡುವೆ ಭಿನ್ನತೆ ಸೃಷ್ಟಿಸಲು, ಮತ ಬ್ಯಾಂಕ್ ಗಟ್ಟಿಗೊಳಿಸಲು ಸ್ಥಾಪಿತ ಹಿತಾಸಕ್ತಿಗಳು ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರದಲ್ಲಿ ತೊಡಗಿವೆ. ಆದರೆ, ಅಂದಿನ ಅಖಂಡ ಕರ್ನಾಟಕವನ್ನು ಹಲವು ವರ್ಷಗಳ ಕಾಲ ಆಳಿದ ಟಿಪ್ಪು ಸುಲ್ತಾನ್ ಓರ್ವ ಸರ್ವಧರ್ಮ ಸಹಿಷ್ಣುವಾಗಿದ್ದರು. ರಾಷ್ಟ್ರಪಿತ ಗಾಂಧೀಜಿಯವರು ಟಿಪ್ಪು ಸುಲ್ತಾನರನ್ನು ಹಿಂದೂ-ಮುಸ್ಲಿಮ್ ಭ್ರಾತೃತ್ವದ ಸಂಕೇತ ಎಂದು ಕರೆದಿದ್ದರು ಎಂದು ಹೇಳಿದರು.

ನಾ ಖಾವೂಂಗ, ನಾ ಖಾನೆ ದೂಂಗಾ ಅನ್ನುತ್ತಾ ಬಡ ಜನರಿಗೆ ಯಾವುದೇ ಒಳಿತು ಮಾಡದ ಪ್ರಸಕ್ತ ಮೋದಿ ಸರಕಾರವು ಬಲಾಢ್ಯ ಕಾರ್ಪೊರೇಟ್ ಕುಳಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತಿದೆ. ಆದರೆ ಟಿಪ್ಪು ಸುಲ್ತಾನ್ ಬಲಾಢ್ಯ ಶ್ರೀಮಂತರಿಗೆ ಕಡಿಮೆ ಲಾಭ ಮತ್ತು ಬಡ ಜನರಿಗೆ ಅಧಿಕ ಲಾಭ ತಂದು ಕೊಡುವ ಜನಪರವಾದ ಯೋಜನೆಯನ್ನು ಪರಿಚಯಿಸಿಕೊಟ್ಟರು. ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಈ ಸಂದರ್ಭದಲ್ಲಿ ಕಾರ್ಪೋರೇಟ್ ಪರವಾದ ಮೋದಿ ಆಡಳಿತ ಮತ್ತು ಬಡಜನರ ಪರವಾದ ಟಿಪ್ಪು ಆಡಳಿತದ ಬಗ್ಗೆ ನಾವು ವಿಚಾರ ಮಾಡಬೇಕಾಗಿದೆ ಎಂದು ಹೇಳಿದರು.

ಮಾಜಿ ಸಚಿವೆ ಹಾಗೂ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಟಿಪ್ಪು ಸುಲ್ತಾನ್ ಮಹಿಳೆಯರು, ರೈತರನ್ನು ಒಳಗೊಂಡಂತೆ ದೇಶದ ಜನರು ಸಮಾನತೆಯನ್ನು ಹೇಗೆ ಸಾಧಿಸಬೇಕೆಂದು ತೋರಿಸಿಕೊಟ್ಟ ಸರ್ವಜ್ಞ ಮತ್ತು ಓರ್ವ ಸಮಾಜ ವಿಜ್ಞಾನಿ. ದೇಹದ ಮೇಲೆ ತೆರಿಗೆ ವಿಧಿಸುವ ನೀಚ ಪ್ರವೃತ್ತಿಯನ್ನು ತೊಡೆದು ಹಾಕಿ ಆತ ಮಹಿಳೆಯರ ಸ್ವಾಭಿಮಾನದ ಜೀವನವನ್ನು ಪರಿಚಯಿಸಿದರು. ಜನರಿಗೆ ಕಂಟಕವಾಗುವ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಮಂದಿ ಹೈದರ್ ಅಲಿ, ಟಿಪ್ಪು ಸುಲ್ತಾನ್ ಕಾಲದ ಆಡಳಿತದ ಚರಿತ್ರೆಯ ಪುಟಗಳನ್ನು ತಿರುವಿ ಹಾಕಬೇಕು. ಹಾಗೆಯೇ, ಈ ನಾಡನ್ನು ಆಳುತ್ತಿರುವ ಮಂದಿ ತಮಗೆ ತೋಚಿದಂತೆ ಊರಿನ ಹೆಸರುಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ತಮ್ಮ ಜೀವನವನ್ನು ಈ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಸಮರ್ಪಿಸಿದ ಕಾರಣಕ್ಕಾಗಿಯಾದರೂ ಕನಿಷ್ಟ ಈ ಶ್ರೀರಂಗಪಟ್ಟಣವನ್ನು ಟಿಪ್ಪು ಸುಲ್ತಾನ್ ಪುರ ಅಥವಾ ಟಿಪ್ಪು ಸುಲ್ತಾನ್ ನಗರ ಎಂದು ಹೆಸರಿಸಬೇಕಾಗಿತ್ತು ಎಂದು ಇಂಗಿತ ವ್ಯಕ್ತಪಡಿಸಿದರು.

ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆಯ ಉಪಾಧ್ಯಕ್ಷ ಡಾ.ಚನ್ನಕೇಶವ ಮೂರ್ತಿ, ಟಿಪ್ಪು ಸುಲ್ತಾನ್ ಈ ನಾಡಿಗೆ ನೀಡಿದ ಶಕ್ತಿ, ಆಡಳಿತ, ಆಡಳಿತ ಸುಧಾರಣೆ, ಅವರ ಜನೋಪಯೋಗಿ ಕಾರ್ಯಕ್ರಮಗಳು ನಮಗೆ ಎಂದಿಗೂ ಪ್ರೇರಣೆಯಾಗಿದೆ. ಇಂತಹ ವ್ಯಕ್ತಿತ್ವದ ಬಗ್ಗೆ ಸಂಶೋಧನೆಗಳಾಗಬೇಕಾಗಿತ್ತು. ಒಂದು ಸಾವಿರ ಪಿ.ಎಚ್.ಡಿಗಳಾಗಬೇಕಾಗಿತ್ತು. ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕಾಗಿತ್ತು ಎಂಬ ವಿಚಾರವನ್ನು ಒತ್ತಿ ಹೇಳಿದರು.

ಅಡ್ವೊಕೇಟ್ ನದೀಮ್ ಉದ್ಘಾಟನಾ ಭಾಷಣ ಮಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಸಾಕಿಬ್, ಮೌಲಾನಾ ಕಾರಿ ಇನಾಯತುರ್ ರಹ್ಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆಯ ಅಧ್ಯಕ್ಷ ತಬ್ರೇಝ್ ಸೇಠ್ ಸ್ವಾಗತಿಸಿದರು. ಅಬ್ರಾರ್ ಅಹ್ಮದ್ ವಂದಿಸಿದರು. ಸಮಾವೇಶಕ್ಕೂ ಮುನ್ನ ಟಿಪ್ಪು ಸಮ್ಮರ್ ಪ್ಯಾಲೇಸ್ ನಿಂದ ಹೊರಟ ಸಾಂಸ್ಕೃತಿಕ ಜಾಥಾವು ಟಿಪ್ಪು ಗುಂಬಝ್ ಮುಂಭಾಗದಲ್ಲಿ ಸಮಾಪನಗೊಂಡಿತು.

ಟಿಪ್ಪು ಸುಲ್ತಾನ್ ರವರ ಇತಿಹಾಸದ ಅನಾವರಣ ಕಾರ್ಯಕ್ರಮದ ಅಂಗವಾಗಿ ಮೂರು ದಿನಗಳ ಕಾಲ ಟಿಪ್ಪು ಚರಿತ್ರೆಯ ಅನಾವರಣ ಮತ್ತು ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಹೊಂದಿದ್ದ ವಸ್ತುಪ್ರದರ್ಶನ, ವಿಚಾರ ಸಂಕಿರಣ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Join Whatsapp
Exit mobile version