Home ಟಾಪ್ ಸುದ್ದಿಗಳು ಪ್ರಕೃತಿ ವಿಕೋಪ ನಿಯಮ ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ, ಕೋವಿಡ್ ಸಂತ್ರಸ್ತರಿಗೆ 5 ಲಕ್ಷ ರೂ....

ಪ್ರಕೃತಿ ವಿಕೋಪ ನಿಯಮ ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ, ಕೋವಿಡ್ ಸಂತ್ರಸ್ತರಿಗೆ 5 ಲಕ್ಷ ರೂ. ನೀಡಿ: ಸಿದ್ದರಾಮಯ್ಯ

ಬೆಂಗಳೂರು: ವಿಕೋಪಗಳಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು ಎಂಬ ಪ್ರಕೃತಿ ವಿಕೋಪ ನಿಯಮಗಳನ್ನು ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ರಾಜ್ಯ ಸರ್ಕಾರವು ಷರತ್ತು ರಹಿತವಾಗಿ ಪ್ರಕೃತಿ ವಿಕೋಪ ನಿಯಮಗಳಡಿ ನೀಡುವ ಪರಿಹಾರದಂತೆಯೆ, ಕೋವಿಡ್ ನಿಂದ ಮೃತಪಟ್ಟ ಎಲ್ಲರ ವಾರಸುದಾರರಿಗೂ 5 ಲಕ್ಷ ರೂಪಾಯಿಗಳನ್ನು ಕಡ್ಡಾಯವಾಗಿ ನೀಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.


ರಾಜ್ಯದಲ್ಲಿ ಕೋವಿಡ್-19 ನ ಎರಡೂ ಅಲೆಗಳಿಂದ ಕನಿಷ್ಠವೆಂದರೂ 4 ಲಕ್ಷ ಜನ ಮರಣ ಹೊಂದಿದ್ದಾರೆ. ಹಾಗಾಗಿ ಕುಟುಂಬಗಳಲ್ಲಿ ದುಡಿಯುವ ಸದಸ್ಯರುಗಳನ್ನು ಕಳೆದುಕೊಂಡು ಈ ಕುಟುಂಬಗಳು ಅನಾಥವಾಗಿವೆ.


ಅಸಂಖ್ಯಾತ ಕುಟುಂಬಗಳಲ್ಲಿ ತಂದೆ ತಾಯಿಯರಿಬ್ಬರನ್ನೂ ಕಳೆದುಕೊಂಡ ಮಕ್ಕಳು ದಿಕ್ಕು ತೋಚದೆ ಕೂತಿದ್ದಾರೆ. ದುಡಿವ ಮಕ್ಕಳನ್ನು ಕಳೆದುಕೊಂಡ ವೃದ್ಧ ತಂದೆ ತಾಯಿಗಳು ತಬ್ಬಲಿಗಳಾಗಿದ್ದಾರೆ.
ಹಾಗಾಗಿ ಅಸಹಾಯಕರು ಸಣ್ಣ ಮಟ್ಟದ ಬದುಕು ಕಟ್ಟಿಕೊಳ್ಳಬೇಕಾದರೆ ನಾಗರಿಕವೆನ್ನಿಸಿಕೊಂಡ ಸರ್ಕಾರಗಳು ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ವಿಪತ್ತು ನಿಧಿಯ ನಿಯಮಗಳ ಪ್ರಕಾರ ಪ್ರತಿ ಕುಟುಂಬಕ್ಕೆ ೫ ಲಕ್ಷ ರೂಪಾಯಿಗಳನ್ನಾದರೂ ಕೊಡಬೇಕು ಎಂದು ಒತ್ತಾಯಿಸಿದ್ದೆವು.


ಕೇಂದ್ರ ಸರ್ಕಾರ ದಿನಾಂಕ 14-3-2020 ರಂದು ಕೋವಿಡ್ನಿಂದ ಮರಣ ಹೊಂದಿದ ಪ್ರತಿ ವ್ಯಕ್ತಿಗೆ 4 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿಸಿ ಅದೇ ದಿನ ಮಾರ್ಪಡಿಸಿಕೊಂಡಿದೆ. ಸರ್ಕಾರಗಳು ಪ್ರಕೃತಿ ವಿಕೋಪದ ನಿಯಮಗಳಡಿ ಕೋವಿಡ್-೧೯ ಸಾಂಕ್ರಾಮಿಕವನ್ನು ನಿರ್ವಹಿಸುತ್ತಿವೆ. ಪ್ರಕೃತಿ ವಿಕೋಪಗಳಾದ ಮಳೆ, ಗಾಳಿ, ಸಿಡಿಲು, ಗುಡುಗು, ಭೂ ಕುಸಿತ, ಭೂಕಂಪ ಮುಂತಾದವುಗಳಿಂದ ಮರಣ ಹೊಂದಿದವರಿಗೆ ತಲಾ ೫ ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ. ಹಾಗಾಗಿ ಕೋವಿಡ್-19 ನಿಂದ ಮರಣ ಹೊಂದಿದವರಿಗೆ ತಲಾ ೫ ಲಕ್ಷ ರೂಪಾಯಿಗಳನ್ನು ಕೊಡಲೇಬೇಕೆಂದು ಒತ್ತಾಯಿಸಿದ್ದೆವು. ಆದರೆ ದಿನಾಂಕ; 28-09- 2021 ರಂದು ಹೊರಡಿಸಿರುವ ಆದೇಶದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳ ದುಡಿಯುವ ವ್ಯಕ್ತಿ ಕೋವಿಡ್- 19ರಿಂದ ಮೃತ ಪಟ್ಟರೆ ರಾಜ್ಯದ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂಪಾಯಿಗಳನ್ನು, ಕೇಂದ್ರ ಸರ್ಕಾರದಿಂದ 50 ಸಾವಿರ ರೂಪಾಯಿಗಳನ್ನು [ಬಿಪಿಎಲ್ ಅಲ್ಲದ ಕುಟುಂಬಗಳೂ ಸೇರಿದಂತೆ ಯಾರೆ ವ್ಯಕ್ತಿಯು ಕೋವಿಡ್ ನಿಂದ ಮೃತಪಟ್ಟರೆ] ನೀಡುವುದಾಗಿ ಆದೇಶ ಹೊರಡಿಸಲಾಗಿದೆ.

ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೆ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು ನೊಂದ ಜನರಿಗೆ ದ್ರೋಹವೆಸಗಲಾಗುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.


ರಾಜ್ಯ ಸರ್ಕಾರ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ನೀಡಲಾಗುವ ಪರಿಹಾರದ ನಿಯಮಗಳಂತೆ ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡಬೇಕೆಂದು ರಾಜ್ಯದಿಂದ ಆಯ್ಕೆಯಾದ ಸಂಸದರು ಮತ್ತು ರಾಜ್ಯ ಸರ್ಕಾರ ಕೇಂದ್ರವನ್ನು ಆಗ್ರಹಿಸಬೇಕು ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version