ಆನೆಗಳ ಹಾವಳಿ ನಿಯಂತ್ರಣಕ್ಕೆ ವಿಫಲವಾದ ಸರ್ಕಾರ: ವಿಧಾನಸಭೆಯಲ್ಲಿ ಎಂ.ಪಿ.ಕುಮಾರಸ್ವಾಮಿ ಗರಂ

Prasthutha|

ಬೆಂಗಳೂರು: “ಪರಿಹಾರ ತಗ್ಗೋಳಿ ನೀವು ಸಾಯಲು ರೆಡಿಯಾಗಿ” ಆನೆಗಳ ಹಾವಳಿ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಕುರಿತು ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನ ಸಭೆಯಲ್ಲಿಂದು ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಪ್ರತಿ ಸಾರಿಯೂ ಸರ್ಕಾರಕ್ಕೆ ಆನೆಗಳ ಹಾವಳಿ ತಡೆಗಟ್ಟುವಂತೆ ಗಮನ ಸೆಳೆಯಲಾಗುತ್ತದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ಷೇತ್ರದ ಜನರ ಮುಂದೆ ನಮಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಆನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ಇಲ್ಲವೆ ಆನೆಗಳ ಭ್ರೂಣ ಹತ್ಯೆಯಂತಹ ಕ್ರಮಗಳ ಅವುಗಳ ಸಂಖ್ಯೆಯ ಮೇಲೆ ಕಡಿವಾಣ ಹಾಕಿ. ಆನೆ ಕಾರಿಡಾರ್ ನಿರ್ಮಾಣ ಮಾಡಿ ಎಂದು ಸರ್ಕಾರದ ಗಮನ ಸಳೆದರು.

- Advertisement -

ಮೂಡಿಗೆರೆ ಕ್ಷೇತ್ರದಲ್ಲಿ ಈಗಾಗಲೇ ಆನೆಗಳ ಹಾವಳಿಯಿಂದ ಆರು ಮಂದಿ ಸಾವನ್ನಪ್ಪಿದ್ದಾರೆ. ಕಳಸದಲ್ಲಿ ಗಿರಿಜನರ ಹೊಲಗಳಿಗೆ ಆನೆಯೊಂದು ನುಗ್ಗಿ ಬೆಳೆಯನ್ನು ಸಂಪೂರ್ಣ ನಾಶಪಡಿಸಿದೆ. ರಾಜ್ಯ ಸರ್ಕಾರದಿಂದ ಆನೆಗಳ ಹಾವಳಿಯಿಂದ ಬೆಳೆ ನಾಶವಾದವರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಆನೆಗಳ ಭಯದಿಂದ ಸುಮಾರು 2ರಿಂದ 5 ಸಾವಿರ ಎಕರೆ ಭೂಮಿಯಲ್ಲಿ ಕೃಷಿಯನ್ನು ಸ್ಥಗಿತಗೊಳಿಸಿರುವ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, 2000ರಿಂದ ಇದುವರೆಗೂ 74 ಆನೆಗಳನ್ನು ಹಿಡಿಯಲಾಗಿದೆ. ಮೂಡಿಗೆರೆಯಲ್ಲಿ ಬೈರ ಎಂಬ ಹೆಸರಿನ ಆನೆಯ ಉಪಟಳ ಜಾಸ್ತಿಯಾಗಿದ್ದು ಅದನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 9ರಂದು ಆನೆಯನ್ನು ಹಿಡಿಯಲು ತಂಡ ರಚನೆ ಮಾಡಿ ಆದೇಶ ಮಾಡಲಾಗಿದೆ. ಆನೆಯ ಉಪಟಳದಿಂದ ಕೃಷಿ ಚಟುವಟಿಕೆ ಕೈಗೊಳ್ಳದ ರೈತರಿಗೂ ಕೂಡ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

- Advertisement -