Home ಟಾಪ್ ಸುದ್ದಿಗಳು ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ 8 ವರ್ಷ ಜೈಲು!

ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ 8 ವರ್ಷ ಜೈಲು!

ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆಗೆ ಕೋರ್ಟ್​ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿ ಈ ಶಿಕ್ಷೆ ನೀಡಲಾಗಿದೆ.

ಸಂದೀಪ್ ಲಮಿಚಾನೆ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೋಷಿ ಎಂದು ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದ್ದು, ಶಿಕ್ಷೆ ಕಾಯ್ದಿರಿಸಿತ್ತು. ಇದೀಗ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಶಿಶಿರ್ ರಾಜ್ ಧಾಕಲ್ ವಿಚಾರಣೆ ನಂತರ 8 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

2022ರಲ್ಲಿ ಲಾಮಿಚಾನೆ ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದ ಕೆರಿಬಿಯನ್​ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿದ್ದರೂ ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನುರಹಿತ ವಾರಂಟ್​ಹೊರಡಿಸಿತ್ತು. ಬಳಿಕ ತವರಿಗೆ ಮರಳುವಾಗ ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಕ್ಕೆ ಪಡೆದು ಕೋರ್ಟ್​ಗೆ ಹಾಜರುಪಡಿಸಿದ್ದರು.

ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಅವರು ಮೂರು ತಿಂಗಳು ಜೈಲಿನಲ್ಲಿದ್ದರು. ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರಿಂದ ಹೈಕೋರ್ಟ್​ಅವರಿಗೆ ಜಾಮೀನು ನೀಡಿತ್ತು.

ಕಳೆದ ವರ್ಷ ಜ.12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್​ ಕೂಡ ಆಡುತ್ತಿದ್ದರು. ಇದೀಗ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಆದ ಕಾರಣ ಮುಂದೆ ಕ್ರಿಕೆಟ್​ ಆಡಲು ಸಾಧ್ಯವಾಗಲಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

2022ರಲ್ಲಿ ಸಂದೀಪ್ ಲಮಿಚಾನೆ ವಿರುದ್ಧ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.

ಐಪಿಎಲ್​ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಪರ ಆಡಿದ್ದ ಸಂದೀಪ್ ಲಮಿಚಾನೆ ಒಟ್ಟು 9 ಪಂದ್ಯಗಳನ್ನು ಆಡಿ 13 ವಿಕೆಟ್​ ಪಡೆದಿದ್ದಾರೆ. 2018 ಮತ್ತು 2019ರ ಆವೃತ್ತಿಯಲ್ಲಿ ಅವರು ಆಡಿದ್ದರು.

Join Whatsapp
Exit mobile version