Home ಟಾಪ್ ಸುದ್ದಿಗಳು ದೇಶಾದ್ಯಂತ ಕುತೂಹಲ ಕೆರಳಿಸಿದ ಪಂಚರಾಜ್ಯ ಚುನಾವಣಾ ಫಲಿತಾಂಶ ನಾಳೆ ಪ್ರಕಟ

ದೇಶಾದ್ಯಂತ ಕುತೂಹಲ ಕೆರಳಿಸಿದ ಪಂಚರಾಜ್ಯ ಚುನಾವಣಾ ಫಲಿತಾಂಶ ನಾಳೆ ಪ್ರಕಟ

ನವದೆಹಲಿ: ತೀವ್ರ ಕುತೂಹಲ ಮೂಡಿಸಿದ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಫಲಿತಾಂಶಕ್ಕೂ ಮುನ್ನ ಯಾವ ಪಕ್ಷಗಳು ಪಂಚರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಲಿವೆ ಎಂಬ ಬಗ್ಗೆ ದೇಶಾದ್ಯಂತ ಕುತೂಹಲ ಹೆಚ್ಚಿದೆ.

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ, ಹಾಗೂ ಮಣಿಪುರ ವಿಧಾನಸಭೆ ಸೇರಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಸಹಜವಾಗಿಯೇ ದೇಶಾದ್ಯಂತ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಹಲವು ಚುನಾವಣೋತ್ತರ ಸಮೀಕ್ಷೆಗಳು ನಡೆದಿದ್ದು, ಕಣದಲ್ಲಿದ್ದ ವಿವಿಧ ಪಕ್ಷಗಳ ಆಭ್ಯರ್ಥಿಗಳ ನಡುವೆ ಸಂತಸ ಮತ್ತು ಆತಂಕ ಎರಡನ್ನೂ ಹೆಚ್ಚಿಸಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದಾಖಲೆಯ 2ನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಈಗಾಗಲೇ ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದೇ ವೇಳೆ, ಪಂಜಾಬ್‌ನಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್‌ ಹಾಗೂ ಅಕಾಲಿದಳದ ಹೊರತಾದ ಪಕ್ಷವೊಂದು ಅಧಿಕಾರಕ್ಕೆ ಬರಲಿದ್ದು, ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿವೆ

ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಸಮೀಕ್ಷೆಗಳ ಚುನಾವಣೋತ್ತರ ಫಲಿತಾಂಶಗಳು ವಿಭಿನ್ನವಾಗಿಯೇ ಇವೆ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಕೆಲವು ಸಮೀಕ್ಷೆಗಳು ಬಿಜೆಪಿ ಜಯ ಗಳಿಸಿ ಅಧಿಕಾರಕ್ಕೇರಲಿದೆ ಎಂದಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಈ ಮೂರು ರಾಜ್ಯಗಳಲ್ಲಿ ‘ಅತಂತ್ರ ವಿಧಾನಸಭೆ’ ಸೃಷ್ಟಿಯಾಗಲಿದೆ ಎಂದಿದೆ. ಯಾವ ಸಮೀಕ್ಷೆಗಳು ಎಷ್ಟರ ಮಟ್ಟಿಗೆ ನಿಜವಾಗಲಿವೆ ಮತ್ತು ಯಾವ ರಾಜ್ಯಗಳಲ್ಲಿ ಯಾವ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂಬುದು ಗುರುವಾರ ಫಲಿತಾಂಶ ಬರುವವರೆಗೂ ಕಾದು ನೋಡಬೇಕಾಗಿದೆ.

Join Whatsapp
Exit mobile version