Home ಟಾಪ್ ಸುದ್ದಿಗಳು ಪೊಲೀಸರ ಅಪ್ರಮಾಣಿಕತೆ ಸಹಿಸಲಾಗದು: ಗೃಹ ಸಚಿವ ಅರಗ ಜ್ಞಾನೇಂದ್ರ

ಪೊಲೀಸರ ಅಪ್ರಮಾಣಿಕತೆ ಸಹಿಸಲಾಗದು: ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ನಾಗರೀಕ ಜಗತ್ತು ಸಂದಿಗ್ಧ ಪರಿಸ್ಥಿತಿಯತ್ತ ಹೋಗುತ್ತಿರುವಾಗ ಪೊಲೀಸರ ಪಾತ್ರ ಮತ್ತು ಹೊಣೆಗಾರಿಕೆ ದೊಡ್ಡದಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಕಚೇರಿ ಆವರಣದಲ್ಲಿ ನಗರ ಪೊಲೀಸರು ವಶಪಡಿಸಿಕೊಂಡ ಮಾಲುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ಮರಳಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಪರಾಧಿಗಳು ಸಮಾಜಘಾತುಕರು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳನ್ನು ಬಳಸುತ್ತಿದ್ದು ಅದಕ್ಕಿಂತ ಮಿಗಿಲಾದ ಸೌಲಭ್ಯಗಳನ್ನು ಪೊಲೀಸ್ ಇಲಾಖೆ ಹೊಂದಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.


ಪೊಲೀಸ್ ಇಲಾಖೆಗೆ ಅವಮಾನ ತರುವ ಕೆಲಸವನ್ನು ಯಾರೇ ಮಾಡಿದರೂ ಸಹಿಸವುದಿಲ್ಲ. ರೌಡಿಗಳು ಸೇರಿದಂತೆ ಅಪರಾಧಿ ಜಗತ್ತಿನೊಂದಿಗೆ ಕೈ ಜೋಡಿಸುವವರನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಪರಾಧಿಗಳು ಸಮಾಜಘಾತುಕರ ಜೊತೆಗೆ ಕೈಜೋಡಿಸುವವರ ಬಗ್ಗೆ ವರದಿ ಪಡೆದು ಎಲ್ಲಿಡಬೇಕೋ ಅಲ್ಲಿಡುತ್ತೇವೆ ಎಂದು ಎಲ್ಲರೂ ಅಪ್ರಮಾಣಿಕರಲ್ಲ. ಕೆಲವರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.
ಪೊಲೀಸರು ಅಪರಾಧಿ ಜಗತ್ತನ್ನು ಮೆಟ್ಟಿ ನಿಲ್ಲುವ ಅಥವಾ ತುಳಿಯುವ ಕೆಲಸ ಮಾಡಬೇಕೇ ಹೊರತು ಅಪರಾಧಿಗಳೊಂದಿಗೆ ಶಾಮೀಲಾಗಬಾರದು. ಪ್ರಮಾಣಿಕವಾಗಿ ಕೆಲಸ ಮಾಡಿದವರಿಗೆ ಸರ್ಕಾರ ಬೆನ್ನು ತಟ್ಟುವ ಕೆಲಸ ಮಾಡಲಿದೆ. ಇಲಾಖೆಯ ಕೆಲವರು ಅಪರಾಧಿಗಳ ಜೊತೆಗೆ ಸಂಪರ್ಕ ಹೊಂದಿರುವ ಮಾತುಗಳು ಕೇಳಿ ಬಂದಿವೆ. ಪೊಲೀಸರ ಬಗ್ಗೆ ಅಲ್ಲಿ ಇಲ್ಲಿ ಅಪಸ್ವರೂಪಗಳು ಕೇಳಿ ಬರುತ್ತಿವೆ. ಪೊಲೀಸರ ಅಪ್ರಮಾಣಿಕತೆ ಸಹಿಸಲಾಗದು. ಇದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರ ಪ್ರಾಣ, ಮಾನ, ಸ್ವತ್ತು ರಕ್ಷಣೆ ಮಾಡುವಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಪೊಲೀಸರ ಬಗ್ಗೆ ಮೆಚ್ಚುಗೆ ಇದೆ. ಶಾಸಕ ಸತೀಶ್ ರೆಡ್ಡಿ ಮನೆ ಬಳಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು 24 ಗಂಟೆಯಲ್ಲೇ ಭೇದಿಸಿ ನೆಮ್ಮದಿ ನೀಡಿದ್ದಾರೆ.
ಹಲವು ಅಪರಾಧ ಕೃತ್ಯಗಳನ್ನು ಸಿನಿಮೀಯ ರೀತಿಯಲ್ಲಿ ಬೇಧಿಸಿ ಅಪರಾಧಿಗಳನ್ನು ಬಂಧಿಸಿದ್ದಾರೆ ಅದನ್ನು ನೋಡಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದು ಹೊಗಳಿದರು.


ಒಂದೇ ಬಾರಿಗೆ ಅಪರಾಧ ನಿಲ್ಲಿಸಲು ಆಗುವುದಿಲ್ಲ. ಇಲ್ಲಿ ಪ್ರದರ್ಶನಕ್ಕಿಟ್ಟಿರುವ ಕೋಟ್ಯಂತರ ರೂ. ಬೆಲೆ ಬಾಳುವ ಸ್ವತ್ತುಗಳನ್ನು ನೋಡಿದರೆ ಪೊಲೀಸರ ಬಗ್ಗೆ ಅಪಸ್ವರದ ಮಾತುಗಳನ್ನು ಆಡುವವರ ಮನಸ್ಸೂ ಕೂಡ ಬದಲಾವಣೆಯಾಗುತ್ತದೆ. ಅವರು ಹೇಗೆ ಅರ್ಪಹಣಾ ಭಾವದಿಂದ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
36 ಕೋಟಿ ಮೊತ್ತದ ಸ್ವತ್ತು, 32 ಕೋಟಿ ಮೊತ್ತದ ಮಾದಕ ವಸ್ತುವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿ ವಾರಸುದಾರರಿಗೆ ನೀಡಲಾಗಿದ್ದು ಯಾರಿಗಾದರೂ ತಮ್ಮ ವಸ್ತುಗಳನ್ನು ಕಳೆದುಕೊಂಡಾಗ ಆಘಾತ ಹೆಚ್ಚಿರುತ್ತದೆ. ಮರಳಿ ಆ ವಸ್ತುವನ್ನು ಪಡೆದಾಗ ಅವರಿಗೆ ನೆಮ್ಮದಿ ಹಾಗೂ ಸಂತೋಷ ಸಿಗುತ್ತದೆ ಇದರಿಂದ ಕಾರ್ಯಾಚರಣೆ ನಡೆಸಿದ ಪೊಲೀಸರಿಗೂ ತೃಪ್ತಿ ದೊರೆಯಲಿದೆ ಎಂದು ತಿಳಿಸಿದರು.
ವಶಪಡಿಸಿಕೊಂಡ ವಸ್ತುಗಳ ಪ್ರದರ್ಶನದಿಂದ ಹೊಸ ಜಗತ್ತನ್ನು ಪೊಲೀಸರು ತೋರಿಸಿದ್ದಾರೆ. ಇದರಿಂದ ನನ್ನ ಹೃದಯ ತುಂಬಿ ಬಂದಿದೆ. ಶಿಕ್ಷಣ ಹೆಚ್ಚಾದಂತೆ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂಬ ಅಭಿಪ್ರಾಯವಿತ್ತು. ಆದರೆ, ವಿದ್ಯಾವಂತರ ಸಂಖ್ಯೆ ಹೆಚ್ಚಾಗಿ ದುಡಿಯುವ ಕೈಗೆ ಉದ್ಯೋಗ ಸಿಗುತ್ತಿದ್ದರೂ ಅಪರಾಧಗಳು ನಡೆಯುತ್ತಿವೆ. ಸಾರ್ವಜನಿಕರು, ರಸ್ತೆ, ನೀರು, ಶಾಲೆ ಕೇಳುವಂತೆಯೇ ಪೊಲೀಸ್ ಠಾಣೆಗಳನ್ನು ನೀಡುವಂತೆ ಕೇಳುತ್ತಾರೆ. ಇದನ್ನು ನೋಡಿದರೆ ನಾಗರಿಕ ಜಗತ್ತು ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬುದರ ಬಗ್ಗೆ ಅರಿವಾಗುತ್ತದೆ. ಈ ವಿಚಾರದಲ್ಲಿ ಪೊಲೀಸರ ಪಾತ್ರ ತುಂಬಾ ದೊಡ್ಡದಿದೆ ಎಂದು ಹೇಳಿದರು.


ಅಂತರ್ ರಾಜ್ಯ ಪೊಲೀಸರಿಗೆ ಸೈಬರ್ ತರಬೇತಿ ನೀಡುತ್ತಿರುವುದು ಹೆಮ್ಮೆಯ ವಿಷಯ. ಅಂಬರ್ಗ್ರೀಸ್ ಒಂದು ಕೆಜಿಗೆ ಒಂದು ಕೋಟಿ ರೂ. ಮೌಲ್ಯವಿದೆ ಎಂದು ಹೇಳಲಾಗುತ್ತಿದೆ. ಪ್ರಕೃತ್ತಿ ದತ್ತವಾಗಿ ಸಿಗುವ ಅಮೂಲ್ಯ ವಸ್ತು. ಅದನ್ನು ಹಿಡಿದು ದೇಶದ ಖಜಾನೆಗೆ ತರುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ ಎಂದು ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಟಿ ಗಟ್ಟಲೆ ಬೆಲೆ ಬಾಳುವ ಮಾದಕ ವಸ್ತು, ನೂರರು ಕೋಟಿ ವ್ಯವಹಾರ ಮಾಡುವ ಡ್ರಗ್ಸ್ ಮಾಫಿಯಾಗಳು ಯುವ ಸಮುದಾಯವನ್ನು ವೆಸನಿಗಳನ್ನಾಗಿ ಮಾಡಿದ್ದಾರೆ. ಇತಂಹದನ್ನು ತಡೆಯುವ ಪ್ರಯತ್ನದಲ್ಲಿ ಪೊಲೀಸರ ಕಾರ್ಯ ಕೋಟಿ ಕೋಟಿ ಸೆಲ್ಯೂಟ್ ಹೊಡೆಯುವಂತಹದ್ದು ಎಂದು ಶ್ಲಾಘಿಸಿದರು.
ಯಾವುದೇ ಕೆಲಸ ಸಿಗದಿದ್ದಾಗ ಪೊಲೀಸ್ ಅಥವಾ ಶಿಕ್ಷಕ ವೃತ್ತಿಗೆ ಬರುತ್ತಾರೆ ಎಂಬ ಅಭಿಪ್ರಾಯವಿತ್ತು. ಆದರೆ, ಪೊಲೀಸರು ಕೂಡ ಒಳ್ಳೆಯ ಜೀವನ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬಲ್ಲರು ಎಂಬುದು ದೃಢಪಟ್ಟಿದೆ. ಉತ್ತಮ ವೇತನವನ್ನೂ ನೀಡಲಾಗುತ್ತಿದೆ. ಶೇ.90ರಷ್ಟು ಕಾನ್ಸ್ಟೆಬಲ್ಗಳಿದ್ದಾರೆ. ಶೇ.49ರಷ್ಟು ಪೊಲೀಸರಿಗೆ ವಸತಿ ಸಿಕ್ಕಿದೆ. ಉಳಿದವರಿಗೂ ವಸತಿ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಡಿ ಇಡಲಿದೆ. ಅದಕ್ಕೆ ಪೂರಕವಾಗಿ ಹಣವನ್ನೂ ಬಿಡುಗಡೆ ಮಾಡಲಾಗುವುದು. ಪೊಲೀಸ್ ಇಲಾಖೆ ಎಚ್ಚರವಾಗಿದ್ದರೆ. ಜನರು ನೆಮ್ಮದಿಯಿಂದ ಬದುಕುತ್ತಾರೆ. ಹೆಚ್ಚೆತ್ತ ಪೊಲೀಸರನ್ನು ಶಸಕ್ತಗೊಳಿಸಲಾಗುವುದು. ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಶ್ರಮಿಸಿದ 400 ಪೆÇಲೀಸರಿಗೆ 18 ಲಕ್ಷ ರೂ. ಅವಾರ್ಡ್ ನೀಡಲಾಗಿದೆ ಎಂದು ಹೇಳಿದರು.


ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಬೇರೆ ಬೇರೆ ರಾಜ್ಯಗಳಿಂದ ಜನರು ಬೆಂಗಳೂರಿನಲ್ಲಿ ಬಂದು ನೆಲೆಸಿರುವುದರಿಂದ ಸವಾಲುಗಳೂ ಬೇರೆ ಬೇರೆಯಾಗಿವೆ. ಆದರೂ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡ್ರಗ್ಸ್ ಸಮಸ್ಯೆ ತಡೆಯುವಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ರೌಡಿ, ಗುಂಡಾಗಿರಿಯನ್ನು ತಡೆಯಲು ಕಾನೂನು ರೀತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಜನ ಸಂಪರ್ಕ ಸಭೆ ನಡೆಸಿ ಜನಸ್ನೇಹಿಪೊಲೀಸ್ ತರುವ ಪ್ರಯತ್ನ ಮಾಡಲಾಗಿದೆ. ಜನರಿಗೆ ನ್ಯಾಯ ಒದಗಿಸುವ ಹಾಗೂ ನೆಮ್ಮದಿ ಕೊಡುವ ರೀತಿಯಲ್ಲಿ ಪೊಲೀಸರು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.


ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ ವಿಭಾಗ) ಸೌಮೇಂದು ಮುಖರ್ಜಿ, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಬಿ ವಿಭಾಗದ ಮುಖ್ಯಸ್ಥ ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ)ರವಿಕಾಂತೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp
Exit mobile version