ಬೆಂಗಳೂರು: ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡಾಟ ನಡೆಸಿ ಕುಟುಂಬವೊಂದು ಹೆದರಿ ಮಧ್ಯರಾತ್ರಿಯಿಂದ ಮುಂಜಾನೆವರೆಗೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿಶ್ರಾಂತಿ ಪಡೆಯುವಂತೆ ಮಾಡಿದ್ದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಿಮ್ಸ್ ಕಾಲೇಜಿನ ಎಂಎಸ್ ವಿದ್ಯಾರ್ಥಿ ಬಿಹಾರ ಮೂಲದ ವಿಜಯ ಭಾರದ್ವಾಜ್ (25) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಕಳೆದ ಡಿ.10ರಂದು ರಾತ್ರಿ ಹೊಸಕೋಟೆಯ ಸಂಬಂಧಿಕರ ಮನೆಗೆ ಹೋಗಿ ಗೃಹಿಣಿ ದೀಪಾ ಶ್ರೀಕುಮಾರ್ ವಾಪಸ್ ಆಗುತ್ತಿದ್ದಾಗ ಹೆಬ್ಬಾಳ ಸರ್ಕಲ್ ಬಳಿ ಕಾರು ಪಂಚರ್ ಆಗಿತ್ತು. ಕಾರಿನಲ್ಲಿದ್ದ ಯುವತಿ ಸೇರಿ ಇಬ್ಬರು ಮಕ್ಕಳ ಸಹಾಯದಿಂದ ದೀಪಾ ಟೈರ್ ಬದಲಾಯಿಸುತ್ತಿದ್ದರು.
ಈ ವೇಳೆ ಕಾರಿನಲ್ಲಿ ಬಂದ ಬಂಧಿತ ದುಷ್ಕರ್ಮಿ ಯುವತಿಯನ್ನು ಕಂಡು ಆಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಕೇರ್ ಮಾಡದೆ ಆತನಿಗೆ ಬೈದು ಅಲ್ಲಿಂದ ಕುಟುಂಬಸ್ಥರು ಹೊರಟಿದ್ದಾರೆ. ಇದಾದ ಬಳಿಕ ಕಿಡಿಗೇಡಿ ಕಾರನ್ನು ಹಿಂಬಾಲಿಸಿದ್ದಾನೆ. ಗೊರಗುಂಟೆಪಾಳ್ಯದವರೆಗೂ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದಾನೆ.
ದುಷ್ಕರ್ಮಿಯ ವರ್ತನೆಯ ಬಗ್ಗೆ ದೀಪಾ ಶ್ರೀಕುಮಾರ್ ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದು ಗೊರಗುಂಟೆಪಾಳ್ಯ ಬಳಿ ಹೊಯ್ಸಳ ಪೊಲೀಸರನ್ನು ನೋಡಿದ ದುಷ್ಕರ್ಮಿ ಪರಾರಿಯಾಗಿದ್ದ.
ಮುಂಜಾನೆವರೆಗೂ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿಶ್ರಾಂತಿ ಪಡೆದ ದೀಪಾ ಕುಟುಂಬಸ್ಥರು ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News