ಪಠ್ಯ ಪುಸ್ತಕಗಳ ಬ್ರಾಹ್ಮಣ್ಯೀಕರಣದ ಅಧ್ವಾನ

Prasthutha: June 18, 2022
✍️ಬಂಜಗೆರೆ ಜಯಪ್ರಕಾಶ

ನಾವು ಓದುತ್ತಿದ್ದ ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕದಲ್ಲಿ ಚರಕದ ಬಗ್ಗೆ ಒಂದು ಪಾಠವಿತ್ತು. ‘ಇದು ಮರದ ಚರಕ, ಇದು ಬಡವರ ಚರಕ’ ಎಂಬ ಸಾಲು ಅದರಲ್ಲಿತ್ತು. ಅಲ್ಲಿಯವರೆಗೆ ಆ ಪಾಠಕ್ಕೆ ಹೆಚ್ಚಿನ ಗುಣ ದೋಷಗಳಿವೆ ಎಂದು ಕಾಣುವುದಿಲ್ಲ. ನಂತರದಲ್ಲಿ ‘ಇದು ಇತರರ ಚರಕ, ಇತರರ ಚರಕ ಅಂದ’ ಎಂಬ ಸಾಲುಗಳಿದ್ದವು. ಆಗ ಆ ಪಾಠಕ್ಕೆ ವರ್ಗ ಪಕ್ಷಪಾತದ ಗುಣ ಅಂಟಿಕೊಳ್ಳುತ್ತಿತ್ತು. ‘ಇದು ಬಡವರ ಚರಕ, ಇದು ಇತರರ ಚರಕ’ ಎಂದು ಮಾತ್ರವಾಗಿದ್ದರೆ ಸಾಮಾಜಿಕ ವಾಸ್ತವವನ್ನು ತಿಳಿಸಿಕೊಡುವ ಬೋಧಗುಣ ಮಾತ್ರ ಆ ಪಾಠಕ್ಕಿದೆ ಎಂದು ಭಾವಿಸಿ ಮುಂದಕ್ಕೆ ಹೋಗಲು ಸಾಧ್ಯವಿತ್ತು. ಆದರೆ ಯಾವಾಗ ‘ಇತರರ ಚರಕ ಅಂದ’ ಎಂಬ ಸಾಲು ಅದರೊಳಗೆ ಬಂತೋ, ಆವಾಗ ಅದು ‘ಇತರರ’ ಪರವಾಗಿ ಒಂದು ಗುಣ ವಿಶೇಷಣವನ್ನು ಮಕ್ಕಳಿಗೆ ತುಂಬುವ ಪ್ರಯತ್ನ ಮಾಡಿತು. ‘ಇತರರ ಚರಕ ಅಂದ’ ಎಂದಾದರೆ ಬಡವರ ಚರಕ ಅಂದವಿಲ್ಲ ಎಂಬ ಅರ್ಥ ಮಗುವಿನ ಮನಸ್ಸಿನಲ್ಲಿ ಹುಟ್ಟುವುದಿಲ್ಲವೇ. ಅಷ್ಟು ದೊಡ್ಡ ಆಲೋಚನೆ ‘ಮಗು’ ಮನಸ್ಸಿನಲ್ಲಿ ಹುಟ್ಟದಿದ್ದರೂ, ‘ಇತರರ ಚರಕ ಅಂದ’ ಎಂದು ಪುಸ್ತಕ ಹೇಳಿತು ಎಂಬ ಭಾವನೆ, ಅದು ಶಾಲೆಯ ಪುಸ್ತಕ, ಮಾಸ್ತರು ಅಥವಾ ಮಾಸ್ತರಿಣಿಯಿಂದ ಬೋಧಿಸಲ್ಪಟ್ಟ ಪಾಠ ಎಂಬ ಕಾರಣಕ್ಕೆ ‘ಇತರರ ಚರಕ ಅಂದ’ ಎಂಬ ಮೌಲ್ಯ ನಿರ್ಣಯ ಮಗುವಿನ ಮನಸ್ಸಿನಲ್ಲಿ ನಿಂತು ಬಿಡುತ್ತದೆಯಲ್ಲವೇ. ಆದ್ದರಿಂದ ಆ ಪಾಠದಲ್ಲಿನ ಮೌಲ್ಯ ನಿರ್ಣಯ ಸತ್ಯದ ಪರವಾಗಿ ಇಲ್ಲ ಎಂದು ಭಾವಿಸಬೇಕಾಗುತ್ತದೆ.

ಅದು ಸತ್ಯದ ಪರವಾಗಿ ಇಲ್ಲ ಎಂದು ಯಾಕೆ ಹೇಳಬೇಕಾಗಿ ಬರುತ್ತದೆ ಎಂದರೆ ‘ಅಂದ’ ‘ಚಂದ’ ಎನ್ನುವುದೆಲ್ಲಾ ನೋಡುವವರ ಮನೋಭಾವಕ್ಕೆ ಸಂಬಂಧಪಟ್ಟ ಅಂಶಗಳೇ ಹೊರತು ‘ಅಂದ’ ಎಂಬ ‘ಸಾರ್ವತ್ರಿಕ ಗುಣ’ ಯಾವ ವಸ್ತುವಿನಲ್ಲೂ ಇರುವುದಿಲ್ಲ ಎಂಬುದೇ ಸತ್ಯ. ನೋಡುವವನ ಸಂಸ್ಕಾರ, ಮನಸ್ಥಿತಿ, ಸಂದರ್ಭ ಎಲ್ಲವೂ ಸೇರಿ ಸೌಂದರ್ಯಾನುಭೂತಿಯನ್ನು ಉಂಟು ಮಾಡುತ್ತದೆಯೇ ಹೊರತು ‘ಚಂದ’ ಎಂಬ ವಸ್ತುಸ್ಥಿತಿ ನಿರುಪಾಧಿಕವಾಗಿ ಇಲ್ಲ. ಸರಳ ಮರದ ಚರಕವೇ ಅಂದ ಎಂಬುದು ಗಾಂಧಿಯ ನಿಲುವು. ಸಂಕೀರ್ಣ ಯಂತ್ರ ರೂಪದ ಚರಕ ಅಂದ ಎಂಬುದು ಆಗ ಬ್ರಿಟಿಷರ ನಿಲುವು. ನಾವು ಬ್ರಿಟಿಷರ ವಿರೋಧಿಗಳಾಗಿದ್ದೇವಾದ್ದರಿಂದ ‘ಇತರರ ಚರಕ, ಶ್ರೀಮಂತರ ಚರಕ ಅಂದ’ ಎಂಬ ಮೌಲ್ಯ ನಿರ್ಣಯವನ್ನು ವಿರೋಧಿಸಿ ಗಾಂಧಿವಾದವನ್ನು ಎತ್ತಿ ಹಿಡಿಯಬೇಕು ಎಂದು ಹೇಳುವುದು ಸತ್ಯದ ಪರವಾದ ವಾದವಾಗುತ್ತದೆಯೇ? ಆದರೂ ಆಗಬಹುದು. ಅದು ಬೇರೆ ಬೇರೆ ಸಾಮಾಜಿಕ ಗುಂಪುಗಳ ಸೈದ್ಧಾಂತಿಕ ‘ವಾದ’. ಅದನ್ನು ಪಾಠದಲ್ಲಿ ಹೇಳುವುದು ಸರಿಯೇ ಎಂದರೆ ಸರಿಯಲ್ಲ ಎನ್ನಬೇಕಾಗುತ್ತದೆ.

ಯಾಕೆಂದರೆ ಪಾಠವೆನ್ನುವುದು ಒಂದು ಸಾಮಾಜಿಕ ಗುಂಪಿನ ಪರ, ಮತ್ತೊಂದು ಸಾಮಾಜಿಕ ಗುಂಪಿನ ವಿರೋಧವಾಗಿರುವ ಮೌಲ್ಯಗಳನ್ನು ಬೋಧಿಸುವಂತಿರಬಾರದು. ಇದನ್ನು ಪ್ರಜ್ಞಾಪೂರ್ವಕವಾಗಿ, ಸಾಮಾಜಿಕ ಸನ್ನಿವೇಶದನುಸಾರ ಸಾಕಷ್ಟು ವಸ್ತುನಿಷ್ಠವಾಗಿ ಪಠ್ಯ ಪುಸ್ತಕದ ಪಾಠಗಳು ಪಾಲಿಸುವಂತಿರಬೇಕು.

‘ಸಾಮಾಜಿಕ ಸನ್ನಿವೇಶ’ ಮತ್ತು ‘ಸಾಧ್ಯವಾದಷ್ಟು’ ಎಂಬ ಪದಗಳು ಇಂತಹ ಸನ್ನಿವೇಶದಲ್ಲಿ ನಮ್ಮ ಪ್ರಜ್ಞೆಯನ್ನು ನಿರ್ದೇಶಿಸಬೇಕು. ಯಾಕೆಂದರೆ ಬದಲಾದ ಸನ್ನಿವೇಶದಲ್ಲಿ ನಾವು ಅದಕ್ಕೆ ಹಿಂದಿನ ಮೌಲ್ಯಗಳನ್ನು ಪ್ರತಿಪಾದನೆ ಮಾಡಬಾರದು. ಒಂದು ಕಾಲದಲ್ಲಿ ಹೀಗಿತ್ತು ಎಂಬ ‘ಪರಿಚಯ’ ಬೇರೆ. ಅದೇ ಸರಿ ಎಂಬ ಅರ್ಥ ಬರುವ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರತಿಪಾದನೆ ಬೇರೆ.

ಇದನ್ನೂ ಒಂದು ಉದಾಹರಣೆಯ ಮೂಲಕ ಹೇಳುವುದು ಉಚಿತವೇನೋ. ‘ಇವನು ಬಸವ, ಇವಳು ಕಮಲ’ ಎಂಬ ಪಾಠದಲ್ಲಿ ‘ಬಸವನು ತಂದೆಯ ಜೊತೆ ಪೇಟೆಗೆ ಹೋದನು, ಕಮಲಳು ಅಡುಗೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವಳು’ ಎಂಬ ಸಾಲುಗಳಿದ್ದವು. ಇವು ಒಂದು ಸಾಮಾಜಿಕ ವಾಸ್ತವಾಂಶವನ್ನು ಪರಿಚಯಿಸುತ್ತಿರುವ ರೀತಿಯಲ್ಲಿ ಇಲ್ಲವೇ ಎಂದರೆ ಇದ್ದವು ಎನ್ನಬೇಕಾಗುತ್ತದೆ. ಯಾಕೆ ‘ಇದ್ದವು’ ಎನ್ನಬೇಕಾಗಿದೆ ಎಂದರೆ, ಸ್ವಾತಂತ್ರ್ಯಪೂರ್ವ ಸಮಾಜದ ಆಶಯಗಳಿಗೂ ಸ್ವಾತಂತ್ರ್ಯಾ ನಂತರದ ಸಾಮಾಜಿಕ ನಿಲುವುಗಳಿಗೂ ವ್ಯತ್ಯಾಸವಿದೆ. ಬದಲಾದ ಕಾಲಮಾನವೂ ಕೂಡ ಭಿನ್ನ ಬಗೆಯ ನಿಲುವುಗಳನ್ನು ಬೆಂಬಲಿಸುತ್ತಿವೆ. ಅಂದರೆ ಈ ಪಾಠದಲ್ಲಿ ಬರುವ ಲಿಂಗ ತಾರತಮ್ಯವಾದಿ ಪರೋಕ್ಷ ಸೂಚನೆಯನ್ನು ನಾವು ಬದಲಾದ ಸನ್ನಿವೇಶದಲ್ಲೂ ಮುಂದುವರೆಸುವುದು ಸೂಕ್ತವಲ್ಲ. ಬಸವ ಕಮಲಳ ಪರಿಚಯ ಇಬ್ಬರು ಮಕ್ಕಳ ಪರಿಚಯವಾಗಿರುವವರೆಗೆ ಸರಿ ಇದೆ. ಆದರೆ ಬಸವನು ಪೇಟೆಗೆ ಹೋಗುವುದು, ಮತ್ತು ಕಮಲಳು ಅಡುಗೆ ಮನೆಯಲ್ಲಿ ಸಹಾಯಕ್ಕೆ ನಿಲ್ಲುವುದು ಎಂಬುದರಲ್ಲಿ ಲಿಂಗಾಧಾರಿತ ಕ್ರಮ ವಿಭಜನೆಯನ್ನು ಎತ್ತಿತೋರಿಸುವ ಗುಣವಿದೆ. ಎತ್ತಿ ತೋರಿಸುತ್ತಿರುವುದು ನಿರಾಕರಣೆ ಮಾಡಲಿಕ್ಕಾಗಿಯೋ ಅಥವಾ ಸಮರ್ಥನೆ ಮಾಡಲಿಕ್ಕಾಗಿಯೋ ಎಂಬುದರ ಮೇಲೆಯೇ ಆ ಪಾಠದ ಗುಣ ದೋಷ ಅರ್ಥವಾಗುತ್ತದೆ. ಆ ಪಾಠ ವಸ್ತುಸ್ಥಿತಿಯನ್ನು ಮಾತ್ರ ಹೇಳುತ್ತಿರುವಂತೆ ಕಂಡರೂ ಅದನ್ನು ‘ಅಲಿಪ್ತ’ ಧೋರಣೆ ಎನ್ನಲು ಬರುವುದಿಲ್ಲ. ಇದು ಹೀಗಿತ್ತು, ಹೀಗಿದೆ, ಹೀಗೆಯೇ ಇರುತ್ತದೆ ಎಂಬ ಮನೋಭಾವವನ್ನು ಮಕ್ಕಳಿಗೆ ಸೂಚಿಸಿದಂತಾಗುತ್ತದೆ. ಸಂವಿಧಾನವು ಲಿಂಗ ತಾರತಮ್ಯವನ್ನು ತೊಡೆದು ಹಾಕಬೇಕಾದ ನೀತಿ ಎಂದು ಭಾವಿಸಿರುವುದರಿಂದ, ಬದಲಾಗಿರುವ ಸಾಮಾಜಿಕ ಸನ್ನಿವೇಶವು ಪೇಟೆ ಮತ್ತು ಅಡುಗೆ ಮನೆಯನ್ನು ಹೆಣ್ಣು- ಗಂಡು ಇಬ್ಬರಿಗೂ ಮುಕ್ತವಾಗಿರಿಸಬಯಸುತ್ತಿದೆಯಾದ್ದರಿಂದ ಪಠ್ಯ ಪುಸ್ತಕದಲ್ಲಿದ್ದ ಬಸವ- ಕಮಲ ಪಾಠವನ್ನು ತೆಗೆಯಬೇಕು ಅಥವಾ ಅದರ ಮೌಲ್ಯ ಸೂಚನೆ ಬದಲಾಗುವಂತೆ ಪರಿಷ್ಕರಿಸಬೇಕು.

ಪಠ್ಯ ಪುಸ್ತಕಗಳು ಮಕ್ಕಳಿಗೆ ಕೇವಲ ಓದು, ಬರಹದ ಕೌಶಲ್ಯಗಳನ್ನು ಮಾತ್ರ ಕಲಿಸುವುದಿಲ್ಲ. ಅಲ್ಲಿ ಮೌಲ್ಯಪ್ರಜ್ಞೆ, ನೀತಿ-ನಿಲುವು ಹಾಗೂ ವ್ಯಕ್ತಿತ್ವವನ್ನು ಕೂಡ ಒಂದು ಮಟ್ಟಿಗೆ ರೂಪಿಸುತ್ತವೆ. ಮಗು ಶಾಲೆಯಲ್ಲಿರುವ ಹಾಗೆಯೇ ಮನೆಯಲ್ಲೂ ಇರುತ್ತದೆ. ವ್ಯಕ್ತಿತ್ವ ನಿರೂಪಣೆಯೆಂಬುದು ಕೇವಲ ಪಾಠಗಳಿಂದ ಆಗಿ ಬಿಡುವುದಿಲ್ಲ. ನೋಟ ಮತ್ತು ಒಡನಾಟಗಳೂ ಕೂಡ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹೀಗಿದ್ದರೂ ಪಠ್ಯ ಪುಸ್ತಕಗಳನ್ನು ಸಾಕಷ್ಟು ವಿಷಯಗಳಲ್ಲಿ ತಟಸ್ಥವಾಗಿರುವಂತೆಯೂ, ಮತ್ತೆ ಕೆಲವು ವಿಷಯಗಳಲ್ಲಿ ವಿಚಾರ ಬೋಧಕವಾಗಿರುವಂತೆಯೂ ಪ್ರಜ್ಞಾಪೂರ್ವಕವಾಗಿ ರೂಪಿಸಬೇಕಾಗುತ್ತದೆ.

ಯಾವುದರಲ್ಲಿ ತಟಸ್ಥ, ಯಾವುದರಲ್ಲಿ ವಿಚಾರ ಪ್ರಚೋದಕವಾಗಿರಬೇಕು ಎನ್ನುವುದನ್ನು ನಿರ್ಧರಿಸುವುದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷನೋ ಸದಸ್ಯರೋ ಅಲ್ಲ. ಅವರನ್ನು ನೇಮಿಸಿದ ಆಗ ಅಧಿಕಾರದಲ್ಲಿದ್ದ ಒಂದು ಪಕ್ಷದ ನಿಲುವುಗಳೂ ಅಲ್ಲ. ಆ ಪಕ್ಷಕ್ಕೆ ಸೈದ್ಧಾಂತಿಕ ನಿಲುವುಗಳನ್ನು ರೂಪಿಸುತ್ತಿರುವ ‘ಚಿಂತನಾ ತಂಡವ’ವೂ ಕೂಡ ಈ ವಿಷಯಗಳನ್ನು ನಿರ್ಣಯಿಸುವಂತಿಲ್ಲ. ಹಾಗೆ ನಿರ್ಣಯಿಸುವುದು ಆ ದೇಶದ ಅತ್ಯುನ್ನತ ಕಾನೂನಾದ ಎಲ್ಲಾ ಕಾನೂನುಗಳಿಗೆ ತಾಯಿಯಾದ ಸಂವಿಧಾನ. ಆ ಸಂವಿಧಾನದ ಆಶಯಗಳನ್ನೇ ಪಠ್ಯ ಪುಸ್ತಕವು ತನ್ನ ಪಾಠಗಳಲ್ಲಿ ಹೇಳಲು ಸಾಧ್ಯ. ಸಾಮಾಜಿಕ ಸನ್ನಿವೇಶ ಎನ್ನುವುದು ಯಾವಾಗಲೂ ‘ಪರಿಶುದ್ಧ’ ಸ್ಥಿತಿಯಲ್ಲಿ ಸಿಗುವುದಿಲ್ಲ. ಅದರ ಮನೋಭಾವ ‘ಏಕಾಕೃತಿ’ಯದೂ ಆಗಿರುವುದಿಲ್ಲ. ಅದರ ಹಿತಾಸಕ್ತಿಗಳಲ್ಲಿ ವೈರುಧ್ಯವಿರುವುದು, ವೈರುಧ್ಯಗಳು ಸಂಘರ್ಷಾತ್ಮಕವಾಗಿರುವುದು ಮುಂತಾದವುಗಳೆಲ್ಲಾ ಇದ್ದುದೇ. ಈ ಎಲ್ಲವುಗಳ ನಡುವೆ ಒಂದು ಸಮರಸ ತರುವ ಪ್ರಯತ್ನದ ಅಂಗವಾಗಿ ಒಂದು ಸಂವಿಧಾನ ಮತ್ತು ಒಂದು ವಿಸ್ತೃತ ರಾಜಕೀಯ ವ್ಯವಸ್ಥೆಯನ್ನು ಮಾನ್ಯ ಮಾಡಲಾಗಿರುತ್ತದೆ.

ಪ್ರಸ್ತುತ ಸನ್ನಿವೇಶದಲ್ಲಿ ಅದನ್ನೇ ಅಧಿಕೃತ ನಿಲುವು ಎನ್ನಲಾಗುತ್ತದೆ. ಬೇರೆ ಬೇರೆ ಪಕ್ಷಗಳು, ಅವುಗಳಿಂದ ರಚಿತವಾಗುವ ಬಹುಮತದ ಸರ್ಕಾರಗಳು ಏನೇ ಇದ್ದರೂ ಈ ಅಧಿಕೃತ ಮಾನ್ಯತೆಯ ನಿಲುವುಗಳಿಗೆ ಪೂರಕವಾಗಿಯೇ ಆಡಳಿತ ನಡೆಸಬೇಕು. ಈ ಆಡಳಿತದಲ್ಲಿ ಶಿಕ್ಷಣವೂ ಬರುತ್ತದೆ. ಆ ಶಿಕ್ಷಣ ಕೊಡುವ ಪಠ್ಯ ಪುಸ್ತಕಗಳೂ ಬರುತ್ತವೆ.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ತಾನು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಸೂಕ್ತ ತಿಳಿವಳಿಕೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದೆಂದರೆ ತನ್ನ ಮೂಗಿನ ನೇರಕ್ಕೆ, ತನ್ನ ಇಚ್ಛೆಗಳಿಗನುಸಾರವಾಗಿ ಪಾಠಗಳನ್ನು ರೂಪಿಸಿ ಅದನ್ನು ಮಕ್ಕಳಿಗೆ ಬೋಧಿಸು ಎಂದು ನಿಗದಿಪಡಿಸುವುದು ಎಂದು ಅದು ಭಾವಿಸಿದಂತಿದೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ನೇಮಕಗೊಳ್ಳಬೇಕಾದ ತುರ್ತು ಏನಾದರೂ ಇತ್ತೇ? ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಪರಿಷ್ಕರಣೆಗೊಂಡಿದ್ದ ಪಠ್ಯ ಪುಸ್ತಕಗಳು ಸಾಕಷ್ಟು ಪರಿಶ್ರಮದಿಂದ ರೂಪುಗೊಂಡವುಗಳಾಗಿದ್ದವು. ಬರಗೂರು ರಾಮಚಂದ್ರಪ್ಪ ಸ್ವತಃ ಎಡಪಂಥೀಯ ಚಿಂತನೆಗಳ ಪ್ರಭಾವದಲ್ಲಿ ಬೆಳೆದು ಬಂದವರಾದರೂ ಯಾವುದೇ ರಾಜಕೀಯ ಪಕ್ಷದ ವಕ್ತಾರರಾಗಿ ಇರುವವರಲ್ಲ. ಒಟ್ಟಾರೆ  ಸಮಾಜದ ಜನಮುಖಿ ಆಶಯಗಳ ಪರವಾದ ನಿಲುವುಗಳುಳ್ಳವರು. ಅವರ ನೇತೃತ್ವದ ಸಮಿತಿ ವಿಷಯವಾರು ಉಪಸಮಿತಿಗಳನ್ನು ರಚಿಸಿ, ಪ್ರತಿ ಉಪಸಮಿತಿಯೂ ಕೂಡ ತಾನು ಪರಿಷ್ಕರಿಸಬೇಕಾಗಿರುವ ಪುಸ್ತಕಗಳ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿ ನಂತರ ಪಠ್ಯ ಪುಸ್ತಕಗಳನ್ನು ರೂಪಿಸಿತ್ತು. ಈ ಪ್ರಕ್ರಿಯೆಯಲ್ಲಿ 175 ಜನ ವಿಷಯ ತಜ್ಞರು, ಶಿಕ್ಷಕರು ಪಾಲ್ಗೊಂಡಿದ್ದರು. ಈ ಸಮಿತಿ ಪಠ್ಯ ಪುಸ್ತಕ ರಚಿಸುವಾಗ, ಇದ್ದುದನ್ನು ಪರಿಷ್ಕರಿಸುವಾಗ ಸಂವಿಧಾನದ ಆಶಯಗಳಿಗೆ ಅನುಸಾರವಾಗಿ, ಮಕ್ಕಳ ಶಿಕ್ಷಣಕ್ಕೆ ಅವರವರ ವಯೋಮಾನಕ್ಕೆ ಅನುಗುಣವಾಗಿರುವಂತೆ ವಿಷಯದ ವಸ್ತು ವಿನ್ಯಾಸ ಮಾಡಿ ಪುಸ್ತಕಗಳನ್ನು ರೂಪಿಸಿತ್ತು. ಪ್ರಾದೇಶಿಕವಾದ ಪ್ರಾತಿನಿಧ್ಯವನ್ನು ಗಮನಿಸಿ, ಈವರೆಗೆ ಸೇರ್ಪಡೆಗೊಂಡಿಲ್ಲದಿದ್ದ ಲೇಖಕರ ಬರಹಗಳನ್ನು ಸೇರಿಸಿತ್ತು. ಬೇರೆ ಬೇರೆ ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆಯ ಲೇಖಕರು ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಲಾಗಿತ್ತು.

ಕರ್ನಾಟಕ ಸಮಾಜದ ಬಹಮುಖೀಯತೆ ಹಲವು ಪದರಗಳ ಸಾಂಸ್ಕೃತಿಕತೆ, ಇತಿಹಾಸ, ಪರಂಪರೆ, ಧರ್ಮ ಸುಧಾರಕರು, ಸಮಾಜ ಸುಧಾರಕರು, ಭಾರತದ ಅಖಂಡತೆ, ಸೌಹಾರ್ದತೆ, ಸಹಬಾಳ್ವೆ, ಸಾಮರಸ್ಯ ಮುಂತಾದವುಗಳು ಪ್ರತಿನಿಧಿತವಾಗುವಂತೆ ಪಠ್ಯ ಪುಸ್ತಕಗಳು ಇರಬೇಕು. ಕಾಲಕಾಲಕ್ಕೆ ಬದಲಾಗುವ ಸರಕಾರಗಳ ನಿಲುವುಗಳಿಗೆ ಅನುಸಾರ ಪಾಠಗಳನ್ನು ರೂಪಿಸದೆ, ನಾಲ್ಕು ಕಾಲ ಬಾಳಿಕೆ ಬರುವಂತಹ ನೀತಿಮೌಲ್ಯಗಳು ಮತ್ತು ಪರಂಪರೆಯಲ್ಲಿ ಬೆಳೆದು ಬಂದ ಸರ್ವಜನಾದರಣೀಯವಾದ ಆಶಯಗಳು ವಿದ್ಯಾರ್ಥಿಗಳಿಗೆ ಪರಿಚಯವಾಗಬೇಕು ಎಂಬ ಕಾಳಜಿಯಿಂದ ಪರಿಷ್ಕರಣೆಯನ್ನು ನೆರವೇರಿಸಲಾಗಿತ್ತು. ಹೀಗಿದ್ದೂ ಇದರಲ್ಲಿ ಚಿಕ್ಕ ಪುಟ್ಟ ಮಾಹಿತಿ ದೋಷಗಳಿದ್ದರೆ ಅವುಗಳನ್ನು ಸರಿಪಡಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪರಿಷ್ಕರಣಾ ಸಮಿತಿ ಕೆಲಸ ಮಾಡಬೇಕಿತ್ತು.

ಅತ್ಯಂತ ತರಾತುರಿಯಲ್ಲಿ, ಶೈಕ್ಷಣಿಕ ವರ್ಷ ಆರಂಭವಾಗಲು ಸ್ವಲ್ಪವೇ ಸಮಯ ಉಳಿದಿರುವಾಗ ಪರಿಷ್ಕರಣೆ ಹೆಸರಿನ ತೇಪೆ ಕೆಲಸವನ್ನು ಸಮಿತಿ ನೆರವೇರಿಸಿತು. ಅದರಲ್ಲಿ ಸೇರಿಸಲಾದ ಪಾಠಗಳು, ಕೈಬಿಡಲಾದ ಬರಹಗಳು ಮುಂತಾದವುಗಳ ಬಗ್ಗೆ ಮಾಹಿತಿ ಸೋರಿಕೆಯಾಗಿ ಕೆಲವು ಅಂಶಗಳು ಸಾರ್ವಜನಿಕಗೊಳ್ಳುತ್ತಿದ್ದಂತೆ ಪ್ರತಿರೋಧ ಆರಂಭವಾಯಿತು.  ಅದಕ್ಕೆ ಮುಖ್ಯವಾದ ಕಾರಣ ಪರಿಷ್ಕರಣೆ ತುಂಬಾ ಪಕ್ಷಪಾತಪೂರಿತವಾದುದಾಗಿತ್ತು. ಪಠ್ಯ ಪುಸ್ತಕಗಳನ್ನು ಆರೆಸ್ಸೆಸ್ ನೀತಿ ನಿಲುವುಗಳಿಗೆ ಹೊಂದುವಂತೆ ‘ರಿಪೇರಿ’ ಮಾಡಲಾಗಿತ್ತು. ಧರ್ಮಗಳ ವಿಷಯ ಬಂದಾಗ ಕೋಮುವಾದಿ ದೃಷ್ಟಿಕೋನ ಬಿಂಬಿತವಾಗಿತ್ತು. ಸಾಮಾಜಿಕ ವಾಸ್ತವಾಂಶಗಳ ಪ್ರಶ್ನೆ ಬಂದಾಗ ಬ್ರಾಹ್ಮಣ್ಯದ ಛಾಯೆ ಢಾಳಾಗಿ ಕಾಣುವಂತೆ ತಿದ್ದುಪಡಿ ಮಾಡಲಾಗಿತ್ತು. ಚಾರಿತ್ರಿಕ ವಾಸ್ತವಾಂಶಗಳ ವಿಷಯದಲ್ಲೂ ಇದೇ ರೀತಿಯಲ್ಲಿ ಅಚಾರಿತ್ರಿಕವಾದ ಅಂಶಗಳನ್ನು ಅಳವಡಿಸಲಾಗಿತ್ತು. ಹೊಸ ಧರ್ಮಗಳ ಉದಯಕ್ಕೆ ಕಾರಣವಾದ ಜಾತಿ ಶೋಷಣೆ, ಅಸ್ಪಶ್ಯತೆ, ದಮನ, ಕಂದಾಚಾರ ಮುಂತಾದ ವಿಷಯಗಳ ಪ್ರಸ್ತಾಪ ತೆಗೆದು ಹಾಕಲಾಗಿತ್ತು, ಲಿಂಗಾಯತ ಧರ್ಮದ ಸಂಸ್ಥಾಪಕನಾದ ಬಸವಣ್ಣನ ಜೀವನ ಪರಿಚಯ ಮಾಡುವಾಗ ಪುರೋಹಿತಶಾಹಿ ಧೋರಣೆಯನ್ನು ಬಲಪಡಿಸಲಾಗಿತ್ತು. ಉಪನಯನದಲ್ಲಿ ಜನಿವಾರ ಧಾರಣೆ ಮಾಡಿಕೊಂಡ ನಂತರ ಅದನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ಹೋದ ಎಂಬ ಘಟನಾವಳಿಯಲ್ಲಿ ಜನಿವಾರ ಕಿತ್ತೆಸೆದ ಪ್ರಸ್ತಾಪವನ್ನು ಕೈಬಿಡಲಾಗಿತ್ತು. ಲಿಂಗಾಯತ ಧರ್ಮ ಸ್ಥಾಪಕ ಎಂದು ಪರಿಚಯಿಸುವ ಬದಲು ವೀರಶೈವ ಧರ್ಮ ಸುಧಾರಕ ಎಂದು ಬರೆಯಲಾಗಿತ್ತು. ಈ ಮೊದಲಿನ ಪರಿಷ್ಕರಣೆಯಲ್ಲಿ ಸೇರ್ಪಡೆಗೊಂಡಿದ್ದ ದಲಿತ ಬರಹಗಾರರ ಬರಹಗಳೆಲ್ಲವನ್ನೂ ಕೈಬಿಡಲಾಗಿತ್ತು. ದೇವನೂರು ಮಹಾದೇವರ ಬರಹವನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು. ಕುವೆಂಪು ಅವರ ಭಾವಚಿತ್ರವನ್ನು ಬದಲಿಸಿ ಗೋವಿಂದ ಪೈಗಳ ಚಿತ್ರ ಮುದ್ರಿಸಲಾಗಿತ್ತು. ಪುರಂದರ, ಕನಕ, ಶಿಶುನಾಳ ಷರೀಫ ಮುಂತಾದವರ ಪರಿಚಯವನ್ನು ಕೆಲವು ಸಾಲುಗಳಿಗೆ ಕಡಿತಗೊಳಿಸಲಾಗಿತ್ತು. ಆಚಾರತ್ರಯರನ್ನು ಪರಿಚಯಿಸುವಾಗ ಮಾಧ್ವರು ಮಣಿಮಂಜರಿಯಲ್ಲಿ ಶಂಕರಾಚಾರ್ಯರಿಗೆ ಮಾಡಿದ್ದ ಸಂಕರ ಅಪಹಾಸ್ಯವನ್ನೇ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಅಂಬೇಡ್ಕರ್ ಅವರ ಬಗ್ಗೆ ಪರಿಚಯಿಸುವಾಗ ‘ಸಂವಿಧಾನ ಶಿಲ್ಪಿ’ ಎಂದು ಇದ್ದ ಪರಿಚಯವನ್ನು ಬದಲಿಸಿ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದರು ಎಂದು ಮಾತ್ರ ಹೇಳಲಾಗಿದೆ. ಚನ್ನಣ್ಣ ವಾಲೀಕಾರ ಅಂಬೇಡ್ಕರರ ಬಗ್ಗೆ ಬರೆದಿದ್ದ ಕವಿತೆ ಕೈಬಿಡಲಾಗಿದೆ.

ಇದು ಸಾಲದ್ದಕ್ಕೆ ರೋಹಿತ್ ಚಕ್ರತೀರ್ಥ ಹಿಂದೆ ನಾಡಗೀತೆಯನ್ನು ಅಸಹ್ಯವಾಗಿ ಅಣಕವಾಡಿ ಮಾಡಲಾಗಿದ್ದ ರಚನೆಯನ್ನು ತನ್ನ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದರು. ಪೂರ್ಣಚಂದ್ರ ತೇಜಸ್ವಿ ಬರೆದ ಕವಿತೆಯನ್ನು ‘ನೈಂಟಿ ಎಂ.ಎಲ್. ಕವಿತೆ’ ಎಂದು ಹೀಯಾಳಿಸಿ ಪೋಸ್ಟ್ ಹಾಕಿದ್ದರು. ಸುರಪುರದ ನಾಯಕರು ಮತ್ತಿತರ ಪಾಳೇಗಾರರ ಕೊಡುಗೆಯ ಬಗೆಗಿನ ಭಾಗಕ್ಕೆ ಕತ್ತರಿ ಪ್ರಯೋಗ ನಡೆಸಲಾಗಿತ್ತು. ಪೆರಿಯಾರ್, ನಾರಾಯಣ ಗುರು, ಸಾವಿತ್ರಿ ಬಾ ಫುಲೆ ಮುಂತಾದ ಸಮಾಜ ಸುಧಾರಕರ ಬಗ್ಗೆ ಇದ್ದ ವಿವರಣೆಯನ್ನು ಕತ್ತರಿಸಿ ಕೆಲವೇ ಸಾಲುಗಳಿಗೆ ಇಳಿಸಲಾಗಿತ್ತು.

ಹೀಗೆ ಕೋಮುವಾದಿಯಾದ, ಅದರಲ್ಲೂ ಬ್ರಾಹ್ಮಣ್ಯವಾದಿಯಾದ ಆರೆಸ್ಸೆಸ್‌ ಗೆ ಪ್ರಿಯವಾದ, ಬಹುಜನ ವಿರೋಧಿಯಾದ, ಸಂವಿಧಾನದ ಆಶಯಗಳಿಗಿಂತ ಹೆಚ್ಚಾಗಿ ಸಂಘಪರಿವಾರದ ವಾದಗಳಿಗೆ; ಸಹಬಾಳ್ವೆ, ಕೋಮುಸಾಮರಸ್ಯ ವಿರೋಧಿಯಾಗಿ ಜನರ ನಡುವೆ ಧರ್ಮಾಧಾರಿತ ವಿಂಗಡೀಕರಣ ಬಯಸುವ, ಜಾತಿ ವ್ಯವಸ್ಥೆಯನ್ನು ಖಂಡಿಸದೆ ಯಥಾಸ್ಥಿತಿವಾದವನ್ನು ಬಲಪಡಿಸುವ ದಿಕ್ಕಿನಲ್ಲಿ ಪಠ್ಯಪುಸ್ತಕಗಳನ್ನು ರೂಪಿಸಲಾಗಿದೆ ಎಂಬುದು ಜನಾಕ್ರೋಶ ವ್ಯಕ್ತಗೊಳ್ಳಲು ಕಾರಣವಾಯಿತು. ಮೊದ ಮೊದಲು  ಇದನ್ನು ವಿರೋಧಿಸುತ್ತಿರುವವರು ಕಾಂಗೈ ಬೆಂಬಲಿಗ ಸಾಹಿತಿಗಳು, ಎಡಪಂಥೀಯ ಬುದ್ಧಿಜೀವಿಗಳು ಎಂದು ಆಪಾದಿಸಿ ಪರಿಷ್ಕರಣೆ ಸಮರ್ಥಿಸಿಕೊಳ್ಳಲು ನೋಡಲಾಯಿತು.

ಪರಿಷ್ಕರಣಾ ಸಮಿತಿಯ 7 ಸದಸ್ಯರಲ್ಲಿ ಆರು ಜನ ಬ್ರಾಹ್ಮಣ ಜಾತಿಯವರೇ ಇದ್ದಾರೆಂಬುದು, ಕೈಬಿಟ್ಟಿರುವುದೆಲ್ಲಾ ಶೂದ್ರ, ದಲಿತ ಲೇಖಕರ ಬರಹಗಳಾಗಿದ್ದು, ಸೇರ್ಪಡೆಗೊಂಡಿರುವ ಲೇಖಕರಲ್ಲಿ ಹನ್ನೊಂದು ಜನರೂ ಬ್ರಾಹ್ಮಣ ಜಾತಿಯವರು ಎಂಬ ಅಂಶ ಹೊರ ಬೀಳುತ್ತಿದ್ದಂತೆ ವಿರೋಧ ವ್ಯಾಪಕವಾಯಿತು. ನಂತರ ಅಂಬೇಡ್ಕರ್ ಅಭಿಮಾನಿಗಳು, ಕುವೆಂಪು ಅಭಿಮಾನಿಗಳು, ಬಸವಾನುಯಾಯಿ ಮಠಾಧೀಶರು, ಶಿಕ್ಷಣ ತಜ್ಞರು, ಚಿಂತಕರು ಈ ಪರಿಷ್ಕರಣೆಯ ದುರುದ್ದೇಶಗಳನ್ನು ಖಂಡಿಸಿ ಹೋರಾಟದ ಮಾತೆತ್ತಿದರು.

ಕೇವಲ ಬಿ.ಎಸ್ಸಿ. ಮಾತ್ರ ಓದಿಕೊಂಡು ಸಿಇಟಿ ಪರೀಕ್ಷೆಗೆ ವಿಜ್ಞಾನ, ಗಣಿತ ಮನೆ ಪಾಠ ಹೇಳಿಕೊಡುವ ರೋಹಿತ್ ಚಕ್ರತೀರ್ಥ ಪಠ್ಯಪರಿಷ್ಕರಣಾ ಸಮಿತಿಗೆ ಅಧ್ಯಕ್ಷನಾಗಿರಲು ಯೋಗ್ಯತೆ ಹೊಂದಿಲ್ಲ ಎಂಬ ಮಾತುಗಳು ಪ್ರಬಲವಾಗಿ ಕೇಳಿಬಂದೊಡನೆ ಸಮಿತಿಯನ್ನು ವಿಸರ್ಜಿಸಲಾಯಿತು.

ಈಗ ಪರಿಷ್ಕಾರಗೊಂಡಿರುವ ಪಠ್ಯಪುಸ್ತಕಗಳನ್ನು ಪಾಠ ಮಾಡಲು ಬಳಸಬಾರದು, ಲೋಪಗಳನ್ನು ಸರಿಪಡಿಸಲು ತಜ್ಞ ಸಮಿತಿ ರಚಿಸಬೇಕು, ಅದಕ್ಕೆ ಸ್ವಾಯತ್ತತೆ ಇರಬೇಕು, ಯಾವುದೋ ಪಕ್ಷದ ನೀತಿ ಅನುಸಾರ ಪಠ್ಯಪುಸ್ತಕ ಇರಬಾರದು, ಸಂವಿಧಾನದ ಆಶಯಗಳಾದ ಸಮಾನತೆ, ಸಹಬಾಳ್ವೆ, ಸಾಮರಸ್ಯದ ಅಂಶಗಳು, ಸಮಾಜ ಸುಧಾರಣೆಯ ಆಶಯಗಳು ಬಿಂಬಿತಗೊಂಡಿರುವ ಪಠ್ಯಪುಸ್ತಕ ಬೇಕು ಎಂಬ ಆಗ್ರಹ ರಾಜ್ಯದ ಹಲವೆಡೆ, ಹಲವು ಜನ ವಿಭಾಗಗಳಿಂದ ಪ್ರಬಲವಾಗಿ ಕೇಳಿಬರುತ್ತಿದೆ. ರೋಹಿತ್ ಚಕ್ರತೀರ್ಥ ರೂಪಿಸಿದ ಅಪಕ್ವ ಪಠ್ಯ ಪುಸ್ತಕಗಳು ಬೋಧನೆಗೆ ಅರ್ಹವಾಗಿಲ್ಲ ಎಂಬುದನ್ನು ಸರ್ಕಾರ ಮನಗಾಣುವಂತೆ ಮಾಡಲು ಹಲವು ಹೋರಾಟ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಹೊಸ ಪುಸ್ತಕಗಳು ಬರುವವರೆಗೆ ಈ ಹಿಂದೆ ಪ್ರೊ.ಬರಗೂರು ರಾಮಚಂದ್ರಪ್ಪ ಸಮಿತಿ ರೂಪಿಸಿದ್ದ ಪಠ್ಯಪುಸ್ತಕಗಳನ್ನೇ ಶಾಲೆಗಳಲ್ಲಿ ಬೋಧನೆಗೆ ಬಳಸಬೇಕು, ಹೊಸ ಪುಸ್ತಕಗಳನ್ನು ವಿತರಿಸಬಾರದು ಎಂಬ ಬೇಡಿಕೆಯನ್ನು ಶಿಕ್ಷಣ ಮಂತ್ರಿ ಹಾಗೂ ಸರ್ಕಾರ ಒಪ್ಪಿಕೊಳ್ಳುವುದು ವಿಹಿತಕರ. ಲೋಪಗಳಾಗಿರುವುದನ್ನು ತಿದ್ದುಪಡಿ ಮಾಡಲಾಗುವುದು, ಆಗಬೇಕಿರುವ ತಿದ್ದುಪಡಿಗಳ ಬಗ್ಗೆ ಹದಿನೈದು ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಿಸಿರುವ ಸರ್ಕಾರ, ಅದೇ ಸಮಯದಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳನ್ನೇ ಈ ಸಲ ಶಾಲೆಗಳಿಗೆ ವಿತರಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಪಠ್ಯಪುಸ್ತಕ ಸಂಘದ ಬಗ್ಗೆ ತನ್ನ ಅಧಿಕೃತ ನಿಲುವನ್ನು ಇನ್ನೂ ಪ್ರಕಟಿಸಿಲ್ಲ. ಶಿಕ್ಷಣ ಕ್ಷೇತ್ರವನ್ನು, ಶಿಕ್ಷಣ ಪ್ರಕ್ರಿಯೆಯನ್ನು ತನ್ನ ಪೂರ್ವಗ್ರಹಪೀಡಿತ ಧೋರಣೆಗಳಿಗನುಸಾರ ಬದಲಾಯಿಸ ಬಯಸಿದ ಬಿಜೆಪಿ ಸರ್ಕಾರಕ್ಕೆ ಈ ವಿಷಯದಲ್ಲಿ ಮುಖಭಂಗವಾಗಿರುವುದಂತೂ ಹೌದು. ಅವರದೇ ಪಕ್ಷದ ಕೆಲವು ಶಾಸಕರೂ ಕೂಡ ತಿದ್ದುಪಡಿಯಾದ ಪಠ್ಯಪುಸ್ತಕಗಳ ಬಗ್ಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದು ಸರ್ಕಾರವನ್ನು ಸಾರ್ವಜನಿಕವಾಗಿ ಪೇಚಿಗೀಡು ಮಾಡಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!