ಚಿಕ್ಕಮಗಳೂರು: ಬ್ರೇಕ್ ಫೇಲ್ ಆಗಿ ನಿಯಂತ್ರಣ ಕಳೆದುಕೊಂಡಿದ್ದ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರಾದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಬಾಳೆಹೊನ್ನೂರು ನಿಂದ ಕಳಸಕ್ಕೆ ತೆರಳುವ ಮಾರ್ಗಮಧ್ಯೆ ಸಂಪಿಗೆಕಟ್ಟೆ ಬಳಿ ತಲುಪುತ್ತಿದ್ದಂತೆ ಕೆಕೆಬಿ ಬಸ್ ಬ್ರೇಕ್ ಹಾಳಾಗಿ ನಿಯಂತ್ರಣ ಕಳೆದುಕೊಂಡಿತ್ತು.ಚಾಲಕ ಸುನಿಲ್ ಅವರ ಧೈರ್ಯಹಾಗೂ ಸಮಯೋಚಿತ ನಿರ್ಧಾರದಿಂದ ಎದುರಾಗಬಹುದಾಗಿದ್ದ ದೊಡ್ಡ ಅವಘಡ ನಿಯಂತ್ರಣಕ್ಕೆ ಸಿಕ್ಕಿದೆ.
ಬ್ರೇಕ್ ಫೇಲ್ ಆಗಿ ನಿಯಂತ್ರಣ ಕಳೆದುಕೊಂಡಿದ್ದ ಬಸ್ಸನ್ನು ಸೂಕ್ತ ಸಮಯಕ್ಕೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಸುನಿಲ್ ರಸ್ತೆ ಪಕ್ಕದ ಚರಂಡಿಗೆ ಇಳಿಸಿದ್ದಾರೆ. ಇದರಿಂದಾಗಿ ತಮ್ಮೊಂದಿಗೆ ಬಸ್ಸಿನ ಪ್ರಯಾಣಿಕರ ಜೀವವನ್ನು ರಕ್ಷಣೆ ಮಾಡುವಲ್ಲಿ ಸುನೀಲ್ ಯಶಸ್ವಿಯಾಗಿದ್ದಾರೆ.
ಬಸ್ಸಿನಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ತೋಟಕ್ಕೆ ತೆರಳುವ ಕೆಲಸದ ಕಾರ್ಮಿಕರು, ಆಸ್ಪತ್ರೆಗಳಿಗೆ ತೆರಳುವ ವಯೋವೃದ್ಧರು ಪ್ರಯಾಣ ನಡೆಸುತ್ತಿದ್ದರು. ಚಾಲಕನ ಈ ಸಮಯೋಚಿತ ಹಾಗೂ ಜವಾಬ್ದಾರಿಯುತ ನಡೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪ್ರಶಂಸಿಸಿದ್ದಾರೆ.