Home ಟಾಪ್ ಸುದ್ದಿಗಳು ಶಾಸಕಾಂಗ, ಕಾರ್ಯಾಂಗದ ನಿರ್ಲಕ್ಷ್ಯದಿಂದ ನ್ಯಾಯಾಲಯಗಳಿಗೆ ಹೊರೆ: ನ್ಯಾ.ಎನ್.ವಿ.ರಮಣ

ಶಾಸಕಾಂಗ, ಕಾರ್ಯಾಂಗದ ನಿರ್ಲಕ್ಷ್ಯದಿಂದ ನ್ಯಾಯಾಲಯಗಳಿಗೆ ಹೊರೆ: ನ್ಯಾ.ಎನ್.ವಿ.ರಮಣ

➤ರಾಜಕೀಯ ಕಾರಣಕ್ಕಾಗಿ ಪಿಐಎಲ್ ಬಳಕೆ

ನವದೆಹಲಿ: ಕಳೆದ ಆರು ವರುಷಗಳಿಂದ ನ್ಯಾಯಾಂಗದಲ್ಲಿ ಅಧಿಕಾರಿಗಳು 16% ಮಾತ್ರ ಹೆಚ್ಚಾಗಿದ್ದಾರೆ. ಆದರೆ ಜಿಲ್ಲಾ ಕೋರ್ಟುಗಳಲ್ಲಿ ವ್ಯವಹಾರವು 54.64% ಹೆಚ್ಚಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಮುಖ್ಯ ನ್ಯಾಯಾಧೀಶರುಗಳ ಮತ್ತು ಮುಖ್ಯಮಂತ್ರಿಗಳ 11ನೇ ಜಂಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 “ಕಾರ್ಯಾಂಗದ ನಾನಾ ಘಟಕಗಳಲ್ಲಿನ ಕೆಲಸಗೇಡಿತನ, ಶಾಸಕಾಂಗವು ತನ್ನ ಪೂರ್ಣ ಸತ್ವವನ್ನು ಅರಿಯದಿರುವುದು ಈ ಎರಡು ನ್ಯಾಯಾಂಗದ ಮತ್ತು ದೇಶದ ಬವಣೆ ಹೆಚ್ಚಿಸಿವೆ. ನಿಶ್ಚಿತ ಸಂಖ್ಯೆಗಿಂತ ಕಡಿಮೆ ನ್ಯಾಯಾಧೀಶರ ಸಂಖ್ಯೆ ಸಹ ಸಮಸ್ಯೆ ಹೆಚ್ಚಿಸಿದೆ ಎಂದು ಹೇಳಿದರು.

140 ಕೋಟಿ ಜನಸಂಖ್ಯೆಯ ಲೋಕದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನ್ಯಾಯಾಂಗವು ತನ್ನ ಮಿತಿ ಪರೀಕ್ಷೆಯಲ್ಲಿದೆ. ಜಗತ್ತಿನ ಬೇರೆ ಯಾವ ದೇಶದ ನ್ಯಾಯಾಂಗವೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನ್ಯಾಯ ವಿಚಾರಣೆಗೆ ಕಿವಿಗೊಡುವುದಿಲ್ಲ ಎಂದು ಹೇಳಿದರು.

  ತಹಶೀಲ್ದಾರು ರೈತರ ಜಮೀನು, ಖಾತೆ ಇತ್ಯಾದಿ ದೂರುಗಳ ಬಗೆಗೆ ಸರಿಯಾಗಿ ಕಾರ್ಯ ನಿರ್ವಹಿಸಿದರೆ ರೈತರು ಯಾರೂ ಕೋರ್ಟಿಗೆ ಬರುವುದಿಲ್ಲ. ಗ್ರಾಮ ಪಂಚಾಯತಿಗಳು, ಮುನಿಸಿಪಾಲಿಟಿಗಳು ಅವರ ಪಡಿತರ ಚೀಟಿ, ನೆಲದ ಬಗೆಗೆ ಸರಿಯಾಗಿ ಕೆಲಸ ಮಾಡಿದರೆ ನಿವಾಸಿಗಳು ಕೋರ್ಟ್ ಕಟ್ಟೆ ಹತ್ತಲಾರರು. ಭೂ ವಿವಾದಗಳೇ ಇರುತ್ತಿರಲಿಲ್ಲ. ಈಗ ರಾಶಿ ಬಿದ್ದಿರುವ ಮೊಕದ್ದಮೆಗಳಲ್ಲಿ 66% ಅವೇ ಆಗಿವೆ. ಹಾಗೆಯೇ ಕಂದಾಯ ಅಧಿಕಾರಿಗಳೂ ನಿಯಮಾನುಸಾರ ಈ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಸೇವಾ ನಿಯಮಗಳು ಸರಿಯಾಗಿ ಪಾಲನೆಯಾದರೆ ನ್ಯಾಯಾಲಯದ ನಿಯಮಗಳಿಗೆ ಯಾರೂ ಅಲೆಯುವುದಿಲ್ಲ. ಕಾನೂನು ಬಾಹಿರ ದಸ್ತಗಿರಿ, ಪೊಲೀಸ್ ವಶದಲ್ಲಿ ಸಾವು, ಪೊಲೀಸ್ ತನಿಖೆ ಇತ್ಯಾದಿಗಳೂ ತೀರಾ ಕಡಿಮೆ ಇರುತ್ತಿತ್ತು ಎಂದು ರಮಣ ಹೇಳಿದರು.

“ಸರಕಾರದ ಈ ಅಂತರ ಇಲಾಖೆ ತಕರಾರುಗಳು ಏಕೆ, ಇಲಾಖೆಯೊಳಗೇ ಅಂತರ್ಯುದ್ಧ ಬೇಕೆ, ಯಾಕೆ ಪಿಎಸ್ ಯು ತಕರಾರು ಕೋರ್ಟಿನಲ್ಲಿ ಇತ್ಯರ್ಥವಾಗಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಸರಕಾರವೇ ಅತಿ ದೊಡ್ಡ ದಾವೆದಾರ ಆಗಿದೆ. ಶೇಕಡಾ 50ರಷ್ಟು ಮೊಕದ್ದಮೆ ಸರ್ಕಾರದ ಇಲಾಖೆಗಳಿಗೆ ಸೇರಿದವು ಆಗಿವೆ” ಎಂದು ಅವರು ವಿಷಾದಿಸಿದರು.

ಕಾನೂನು ಮತ್ತು ಸಂವಿಧಾನವನ್ನು ಪಾಲಿಸುವುದು ಒಳ್ಳೆಯ ಸರಕಾರದ ಲಕ್ಷಣ. ಆದರೆ ಅದು ಕಡೆಗಣಿಸಲ್ಪಟ್ಟು ಕೋರ್ಟು ಕಟ್ಲೆಗೆ ಧಾವಿಸುವುದು ಎಷ್ಟು ಸರಿ ಎಂದು ರಮಣ ಪ್ರಶ್ನಿಸಿದರು.

ನ್ಯಾಯಾಲಯ ನಿಂದನೆ ಕೇಸುಗಳು ಯಾಕೆ ಬರುತ್ತವೆಂದರೆ ದೀರ್ಘ ಕಾಲ ನ್ಯಾಯಾಲಯದ ಆದೇಶಗಳನ್ನು ಸರಕಾರ ಜಾರಿಗೊಳಿಸುವುದಿಲ್ಲ. ಇದು ನ್ಯಾಯಾಲಯಗಳಿಗೆ ಹೊಸ ಬಗೆಯ ಭಾರವಾಗಿದೆ. ಕಾರ್ಯಾಂಗವು ತಂತ್ರಗಾರಿಕೆಯಿಂದ ನ್ಯಾಯಾಂಗದ ಮೇಲೆ ಭಾರ ದಾಟಿಸುತ್ತದೆ. ಶಾಸಂಕಾಂಗದ ಅಸ್ಪಷ್ಟತೆಯು ಸಹ ಕೋರ್ಟು ಕಟ್ಲೆಗಳನ್ನು ಹೆಚ್ಚಿಸಿದೆ ಎಂದವರು ತಿಳಿಸಿದರು.

ಮುಖ್ಯ ನ್ಯಾಯಾಧೀಶರು “ಸಂಸತ್ತನಲ್ಲಿ ಡಿಬೇಟ್ ಬಗೆಗೆ ಕಾನೂನು ಬಂತು. ಜನರ ಹಿತ ಬಯಸಿ ಸ್ಪಷ್ಟತೆಯೊಡನೆ ಸಂಸತ್ತು ಒಂದು ಕಾನೂನನ್ನು ಮಾಡಿದರೆ ಅದರಲ್ಲಿ ವಿವಾದ ತೀರಾ ಕಡಿಮೆ ಇರುತ್ತದೆ. ಕಾನೂನು ಮಾಡುವುದಕ್ಕೆ ಮುಂಚೆ ಸಂಸತ್ತಿನಲ್ಲಿ ಸರಿಯಾದ ಚರ್ಚೆ ಆಗಬೇಕು. ಅದಾಗುತ್ತಿದೆಯೆ” ಎಂದು ಪ್ರಶ್ನಿಸಿದರು.

ನ್ಯಾಯಾಂಗದ ನಿಧಾನದ ಬಗೆಗೆ ಆಗಾಗ ನಮ್ಮನ್ನು ದೂರಲಾಗುತ್ತದೆ. ಆದರೆ ಇತ್ಯರ್ಥ ಮಾಡುವ ಪ್ರಕರಣಗಳ ಸಂಖ್ಯೆ ಊಹಿಲಸಾಧ್ಯವಾಗುವಷ್ಟು ಎಂದೂ ಅವರು ತಿಳಿಸಿದರು.

ಕೇಸುಗಳು ರಾಶಿ ಬೀಳಲು ಪಿಐಎಲ್ – ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಸಹ ಒಂದು ಕಾರಣವಾಗಿದೆ. ರಾಜಕೀಯ ಮಾಡಲು, ಕಾರ್ಪೊರೇಟ್ ಜಿದ್ದಿಗೆ ಇಂದು ಪಿಐಎಲ್ ದೊಡ್ಡ ಆಯುಧವಾಗಿದೆ. ಇವುಗಳ ಸಮಾಜ ಬದ್ಧತೆ ಮನವರಿಕೆ ಮಾಡಿಕೊಂಡಿರುವ ನ್ಯಾಯಾಂಗ ಈಗೀಗ ಇಂಥದನ್ನು ಬೆಂಬಲಿಸುವುದು ಕಡಿಮೆ ಮಾಡಿದೆ ಎಂದು ರಮಣ ಹೇಳಿದರು.

 “ಸ್ಥಳೀಯ ಭಾಷೆಗಳನ್ನು ಹೈಕೋರ್ಟುಗಳಲ್ಲಿ ಬಳಸುವಂತೆ ನಾನು ಬಹಳ ಮನವಿಗಳನ್ನು ಸ್ವೀಕರಿಸುತ್ತಿದ್ದೇನೆ. ಈಗ ಅದಕ್ಕೆ ಸಮಯ ಬಂದಿದೆ; ಸರಿಯಾದ ರೀತಿಯಲ್ಲಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ. ಆದರೆ ನ್ಯಾಯದಾನವು ಕಾನೂನಿನ ಬಗೆಗಿನ ಸರಿಯಾದ ಅರಿವು ಮತ್ತು ಒಬ್ಬರ ಬುದ್ಧಿಮತ್ತೆಯನ್ನು ಅವಲಂಬಿಸಿದೆಯೇ ಹೊರತು ಭಾಷೆಯನ್ನಲ್ಲ” ಎಂದೂ ಅವರು ಹೇಳಿದರು.

“ಹೈಕೋರ್ಟುಗಳಿಗೆ ಗೊತ್ತು ಮಾಡಿರುವ 1,104 ಜಡ್ಜ್ ಹುದ್ದೆಗಳಲ್ಲಿ 388 ಹುದ್ದೆ ಭರ್ತಿಯಾಗಿಲ್ಲ. ನಾನು ಸಿಜೆಐ ಆದ ಮೇಲೆ ಶಿಫಾರಸು ಮಾಡಿದ 180ರಲ್ಲಿ ಸರಕಾರವು 126 ಮಾತ್ರ ಭರ್ತಿ ಮಾಡಿದೆ. ಇನ್ನೂ 50 ಮತ್ತೆ ಒಪ್ಪಿಗೆಗಾಗಿ ಕಾದಿವೆ. ಖಾಲಿ ಹುದ್ದೆ ಭರ್ತಿಗಾಗಿ ಸರ್ವೋಚ್ಚ ನ್ಯಾಯಾಲಯವು ಸರಿಯಾದ ಪ್ರಯತ್ನದಲ್ಲೇನೋ ತೊಡಗಿದೆ” ಎಂದು ಜಸ್ಟಿಸ್ ಗಳ ಸಂಖ್ಯೆಗಳ ಬಗೆಗೆ ರಮಣ ಉತ್ತರಿಸಿದರು.

6 ವರುಷದಲ್ಲಿ 16 ಶೇಕಡಾ ಕೋರ್ಟು ಸಿಬ್ಬಂದಿ ಭರ್ತಿ ಆಗಿದ್ದರೆ, ಕೋರ್ಟು ಹೊರೆ 54.64% ಹೆಚ್ಚಾಗಿದೆ. ಇದು ನ್ಯಾಯಾಂಗದಲ್ಲಿ ಏಕೆ ತಡವಾಗುತ್ತದೆ ಎನ್ನುವುದಕ್ಕೆ ಎದ್ದು ತೋರುವ ಅಂಶ. ಅದೇ ವೇಳೆ ಜಾಗತಿಕವಾಗಿ ಜನಸಂಖ್ಯೆ ಮತ್ತು ನ್ಯಾಯಾಧೀಶರ ಸಂಖ್ಯೆಯ ಸರಾಸರಿ ಸಹ ದೇಶದಲ್ಲಿ ಶೋಚನೀಯ ಸಂಖ್ಯೆಯೆನಿಸಿದೆ. ಈಗ ದೇಶದಲ್ಲಿ 10 ಲಕ್ಷ ಜನರಿಗೆ 20 ನ್ಯಾಯಾಧೀಶರು ಎಂದು ಲೆಕ್ಕ, ಅದು ತುಂಬ ಕಡಿಮೆ. ಅದೂ ಕೂಡ ಎಲ್ಲ ಭರ್ತಿ ಆಗುವುದಿಲ್ಲ ಎಂದೂ ರಮಣ ವಿಷಾದಿಸಿದರು.

Join Whatsapp
Exit mobile version