Home ಟಾಪ್ ಸುದ್ದಿಗಳು ಪೊಳ್ಳು ಭರವಸೆ, ರಹಸ್ಯ ಕಾರ್ಯಸೂಚಿಗೆ ಒತ್ತು ನೀಡಿರುವ ಬಜೆಟ್: ಬಿ.ಕೆ. ಹರಿಪ್ರಸಾದ್ ಟೀಕೆ

ಪೊಳ್ಳು ಭರವಸೆ, ರಹಸ್ಯ ಕಾರ್ಯಸೂಚಿಗೆ ಒತ್ತು ನೀಡಿರುವ ಬಜೆಟ್: ಬಿ.ಕೆ. ಹರಿಪ್ರಸಾದ್ ಟೀಕೆ

►ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಳೆದ ವರ್ಷ 1,500 ಕೋಟಿ ನೀಡಿದ್ದರೆ ಈ ಬಾರಿ 200 ಕೋಟಿ ಮಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಪ್ರಗತಿ ವಿರೋಧಿಯಾಗಿದ್ದು, ಕೇವಲ ಚುನಾವಣೆಯನ್ನೇ ಕೇಂದ್ರೀಕರಿಸಿರುವ ಘೋಷಣೆಗಳಿಂದ ತುಂಬಿದೆ. ಈ ಬಜೆಟ್ನಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈಗಾಗಲೇ ಅನುಷ್ಠಾನದಲ್ಲಿರುವ ಯೋಜನೆಗಳನ್ನೇ ಬಜೆಟ್ ನಲ್ಲಿ ಮರುಮುದ್ರಣ ಮಾಡಲಾಗಿದೆ. ತುಳಿತಕ್ಕೊಳಗಾದವರು, ದುಡಿಯುವ ವರ್ಗಗಳು, ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.

ರೈತರಿಗೆ ಶಕ್ತಿ ತುಂಬಬಲ್ಲ ಮಹತ್ವದ ಯೋಜನೆಗಳು ಬಜೆಟ್ ನಲ್ಲಿ ಇಲ್ಲ. ರೇಷ್ಮೆ ಬೆಳೆಗಾರರು, ತೋಟಗಾರಿಕೆ ಬೆಳೆಗಾರರ ಅಭಿವೃದ್ಧಿಗೆ ಪೂರಕವಾದ ಯಾವ ಕ್ರಮಗಳನ್ನೂ ಬಜೆಟ್ನಲ್ಲಿ ಪ್ರಕಟಿಸಿಲ್ಲ. ಹಳೆಯ ಯೋಜನೆಗಳನ್ನೇ ಹೊಸ ಸ್ವರೂಪದಲ್ಲಿ ಪ್ರಕಟಿಸಿರುವ ಮುಖ್ಯಮಂತ್ರಿ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಗೋವುಗಳ ಸಂರಕ್ಷಣೆಗಾಗಿ 100 ಗೋಶಾಲೆಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ವಾಸ್ತವದಲ್ಲಿ ಇದೊಂದು ಪೊಳ್ಳು ಘೋಷಣೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಾಗ ಜಿಲ್ಲೆಗೊಂದು ಗೋಶಾಲೆ ತೆರೆಯುವುದಾಗಿ ಬಿಜೆಪಿ ಸರ್ಕಾರ ಕಳೆದ ವರ್ಷ ಪ್ರಕಟಿಸಿತ್ತು. ಈವರೆಗೆ ಒಂದು ಗೋಶಾಲೆಯೂ ಆರಂಭವಾಗಿಲ್ಲ. ಇವರು 100 ಗೋಶಾಲೆ ತೆರೆಯುವುದು ಕನಸಿನ ಮಾತು ಎಂದರು. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಈ ಬಜೆಟ್ನಲ್ಲಿ ತೀವ್ರ ಅನ್ಯಾಯ ಮಾಡಲಾಗಿದೆ.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಕಳೆದ ವರ್ಷ 500 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದನ್ನು 400 ಕೋಟಿಗೆ ಇಳಿಕೆ ಮಾಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗೆ ಕಳೆದ ವರ್ಷ 1,500 ಕೋಟಿ ಒದಗಿಸಲಾಗಿತ್ತು. ಈ ಬಾರಿ ಈ ಉದ್ದೇಶಕ್ಕೆ ನೀಡಿರುವ ಅನುದಾನ 200 ಕೋಟಿಯನ್ನೂ ದಾಟಿಲ್ಲ. ಕ್ರೈಸ್ತ ಧರ್ಮೀಯರ ಅಭಿವೃದ್ಧಿಗೆ ಹಿಂದಿನ ವರ್ಷ 200 ಕೋಟಿ ಒದಗಿಸಲಾಗಿತ್ತು. ಈ ಬಾರಿ ಕೇವಲ 50 ಕೋಟಿ ಒದಗಿಸಲಾಗಿದೆ ಎಂದರು. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪೂರಕವಾದ ಕ್ರಮಗಳೇ ಬಜೆಟ್ನಲ್ಲಿ ಇಲ್ಲ. ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಆದ್ಯತೆ ನೀಡಿಲ್ಲ. ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯುವ ಕುರಿತು ಮುಖ್ಯಮಂತ್ರಿ ಏನನ್ನೂ ಹೇಳಿಲ್ಲ. ಬದಲಿಗೆ, ನೀಟ್ ಪರೀಕ್ಷೆಗೆ ತರಬೇತಿ ನೀಡಲು ನೆರವಾಗುವ ಕಣ್ಣೊರೆಸುವ ಯೋಜನೆ ಪ್ರಕಟಿಸಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣದ ವಿಚಾರದಲ್ಲಿ ಈ ಸರ್ಕಾರದ ದ್ವಂದ್ವ ನಿಲುವು ಬಜೆಟ್ನಲ್ಲಿ ಬಹಿರಂಗವಾಗಿದೆ. ಹಿಜಾಬ್ ಕಾರಣ ಮುಂದಿಟ್ಟುಕೊಂಡು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಅವಕಾಶ ನಿರಾಕರಿಸುತ್ತಿರುವ ಇದೇ ಸರ್ಕಾರ, ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಶಾಲೆಗಳನ್ನು ತೆರೆಯುವ ಭರವಸೆ ನೀಡಿರುವುದು ಹಾಸ್ತಾಸ್ಪದ. ಕೇಂದ್ರದ ಬಿಜೆಪಿ ಸರ್ಕಾರದ ಹಾದಿಯಲ್ಲೇ ಸಾಗುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ, ಇಲ್ಲಿಯೂ ಸಾರ್ವಜನಿಕ ಉದ್ಯಮಗಳನ್ನು ನಾಶ ಮಾಡಲು ಹೊರಟಿದೆ. ಸಾರ್ವಜನಿಕ ಉದ್ಯಮಗಳಿಂದ ಬಂಡವಾಳ ಹಿಂತೆಗೆಯಲು ಕ್ರಮಕೈಗೊಳ್ಳುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದು ಅಪಾಯಕಾರಿ ನಡೆ. ಇದರಿಂದ ಸರ್ಕಾರ ಸ್ವಾಮ್ಯದ ಉದ್ದಿಮೆಗಳು ಬಂಡವಾಳಶಾಹಿಗಳ ಕೈವಶವಾಗಲಿವೆ. ಕ್ರೀಡಾಂಗಣಗಳನ್ನು ಬಳಸುವುದಕ್ಕೂ ಶುಲ್ಕ ಪಾವತಿಸಬೇಕಾದ ವ್ಯವಸ್ಥೆಯನ್ನು ತರುವ ಘೋಷಣೆ ಬಜೆಟ್ ನಲ್ಲಿದೆ. ಈ ಸರ್ಕಾರ ಎಷ್ಟು ಜನವಿರೋಧಿ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ? ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸುವ ಪ್ರಯತ್ನ ಈ ಬಜೆಟ್ ನಲ್ಲಿ ವ್ಯಾಪಕವಾಗಿದೆ.

ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಲು ಕಾನೂನು ತರುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಸಂಘ ಪರಿವಾರದ ಒತ್ತಡಕ್ಕೆ ಮಣಿದು ಈ ಘೋಷಣೆ ಮಾಡಲಾಗಿದೆ. ಈ ಬಜೆಟ್ ಇಡೀ ರಾಜ್ಯಕ್ಕಾಗಿ ರೂಪಿಸಿದಂತೆ ಇಲ್ಲ. ಹೆಚ್ಚಿನ ಯೋಜನೆಗಳು ಮತ್ತು ಘೋಷಣೆಗಳು ಹಾವೇರಿ ಜಿಲ್ಲೆಗೆ ಸೀಮಿತವಾಗಿವೆ. ಮುಖ್ಯಮಂತ್ರಿಯವರು ತಮ್ಮ ತವರು ಜಿಲ್ಲೆಯನ್ನೇ ರಾಜ್ಯ ಎಂದು ಭಾವಿಸಿ ಬಜೆಟ್ ಮಂಡಿಸಿದಂತಿದೆ ಎಂದು ಅವರು ಟೀಕಿಸಿದ್ದಾರೆ. ಇದು ಸ್ಪಷ್ಟವಾಗಿ ಅಭಿವೃದ್ಧಿ ವಿರೋಧಿಯಾದ ಬಜೆಟ್. ದುಡಿಯುವ ವರ್ಗಗಳನ್ನು ನಿರ್ಲಕ್ಷಿಸಿರುವ ಈ ಬಜೆಟ್ನಲ್ಲಿ ಅಭಿವೃದ್ಧಿಯ ಮುನ್ನೋಟವೇ ಇಲ್ಲ. ಚುನಾವಣಾ ಪ್ರಣಾಳಿಕೆಯಂತೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಸೂಚಿಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ಹರಿಪ್ರಸಾದ್ ದೂರಿದ್ದಾರೆ.

Join Whatsapp
Exit mobile version