Home ಟಾಪ್ ಸುದ್ದಿಗಳು KPSCಗೆ ಶಿವಶಂಕರಪ್ಪ ಸಾಹುಕಾರ್ ನೇಮಕ ಕಾನೂನು ಬಾಹಿರ; SC, STನೌಕರರ ಸಮಿತಿ ಆರೋಪ

KPSCಗೆ ಶಿವಶಂಕರಪ್ಪ ಸಾಹುಕಾರ್ ನೇಮಕ ಕಾನೂನು ಬಾಹಿರ; SC, STನೌಕರರ ಸಮಿತಿ ಆರೋಪ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಸಂವಿಧಾನ ಬಾಹಿರವಾಗಿ ನೇಮಕಮಾಡಿದ್ದು, ಅವರ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ ಸಿ ಅಧ್ಯಕ್ಷರಾಗಬೇಕಾದರೆ ಕೇಂದ್ರ ಸರ್ಕಾರದ ಅಧೀನದಲ್ಲಾಗಲೀ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಾಗಲೀ ಕನಿಷ್ಠ 10 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು. ಇದನ್ನು ಸಂವಿಧಾನದ 316ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಸಹಕಾರಿ ಯೂನಿಯನ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿರುವವರನ್ನು ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಂವಿಧಾನ ಬಾಹಿರವಾಗಿದೆ ಎಂದು ಹೇಳಿದರು.

ಆಯೋಗಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಿವಶಂಕರಪ್ಪ ಎಸ್.ಸಾಹುಕಾರ ಅವರು 10 ವರ್ಷಗಳ ಕಾಲ ರಾಷ್ಟ್ರೀಯ ಸಹಕಾರ ಯೂನಿಯನ್’ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರು. ಇವರ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದೆಂದು ಯೂನಿಯನ್ ಆಫ್ ಇಂಡಿಯಾ ಆದೇಶ ನೀಡಿದೆ. ಇವರ ಕಾರ್ಯಕ್ಷಮತೆ ಬಗ್ಗೆ ನಕಾರಾತ್ಮಕ ವರದಿ ನೀಡಿ ಹುದ್ದೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ಕೆಪಿಎಸ್’ಸಿಗೆ ಉನ್ನತ ಅರ್ಹತೆಯುಳ್ಳ ಮತ್ತು ಸರ್ಕಾರದ ಉನ್ನತ ಹುದ್ದೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವವರನ್ನು ನೇಮಕ ಮಾಡಬೇಕಿತ್ತು. ಪಿ.ಸಿ.ವೋಟಾ ಸಮಿತಿ ವರದಿ ಪ್ರಕಾರ ಹಿರಿಯ ಸದಸ್ಯರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿತ್ತು ಆದರೆ ಸಮಿತಿಯ ವರದಿ ಮತ್ತು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಢಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯ ಕುಮಾರ್, ಹಿರಿಯ ಉಪಾಧ್ಯಕ್ಷ ಆರ್.ಮೋಹನ ಮತ್ತಿತರರು ಹಾಜರಿದ್ದರು.

Join Whatsapp
Exit mobile version