Home ಕರಾವಳಿ ಮಂಗಳೂರು ಉತ್ತರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ಗುರಿ: ಇನಾಯತ್ ಅಲಿ

ಮಂಗಳೂರು ಉತ್ತರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ಗುರಿ: ಇನಾಯತ್ ಅಲಿ

ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಬುಧವಾರ ಬೆಳಗ್ಗೆ ಕಾಟಿಪಳ್ಳ, ಇಡ್ಯಾ, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ, ಪಣಂಬೂರು ಪರಿಸರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.


ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಅವರು, “ಮಂಗಳೂರು ಉತ್ತರ ಕ್ಷೇತ್ರವನ್ನು ಭವಿಷ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದು ಮತದಾರರನ್ನು ಭೇಟಿಯಾಗಿ ಮತ ಯಾಚನೆ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದೆ. ಹೀಗಾಗಿ ಪ್ರತೀ ಮನೆಗಳನ್ನು ಕಾಂಗ್ರೆಸ್ ಗ್ಯಾರಂಟಿ ಅಭಿಯಾನದ ಮೂಲಕ ಜೋಡಿಸಲು ನಮ್ಮ ಕಾರ್ಯಕರ್ತರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಜನರು ಬಿಜೆಪಿ ಸರಕಾರದ ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಹೊರೆಗಳಿಂದ ಕಂಗಾಲಾಗಿದ್ದಾರೆ. ಮತ್ತೊಮ್ಮೆ ಅದೇ ಸರಕಾರ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಏನಾಗಬಹುದು ಎಂಬ ಸ್ಪಷ್ಟ ಅಂದಾಜು ಜನರಲ್ಲಿದೆ. ಹೀಗಾಗಿ ಜನವಿರೋಧಿ ಬಿಜೆಪಿ ಸರಕಾರಕ್ಕೆ ಜನರೇ ವಿರುದ್ಧವಾಗಿದ್ದಾರೆ” ಎಂದರು.


“ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಜಾತಿ, ಸಮುದಾಯವನ್ನು ಪ್ರೀತಿಸುವ, ಯುವಜನರಿಗೆ, ವಿದ್ಯಾರ್ಥಿಗಳಿಗೆ ಮತ್ತು ಗೃಹಿಣಿಯರಿಗೆ ನೆರವಾಗುವ ಸುಭದ್ರ ಸರಕಾರ ಜನರಿಗೆ ದೊರೆಯಲಿದೆ. ಜನಸಾಮಾನ್ಯರು ಜೀವನ ಸಾಗಿಸಲು ಯಾವುದೇ ರೀತಿಯಲ್ಲಿ ಭಯ ಪಡಬೇಕಾದ ಅಗತ್ಯವಿಲ್ಲ” ಎಂದರು.


ಕಾಟಿಪಳ್ಳ ಜನತಾ ಕಾಲನಿಯ ಸಿರಿಗಳ ಬೀಡು, ಆಶ್ರಯ ಕಾಲನಿಯ ಕೊರಗಜ್ಜ ಕ್ಷೇತ್ರಕ್ಕೆ ಇನಾಯತ್ ಅಲಿ ಭೇಟಿ ಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ, ಜಲೀಲ್ ಬದ್ರಿಯಾ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಬಾವಾ ಮಾತ್ರ ಹೋಗಿದ್ದಾರೆ, ಪಕ್ಷಕ್ಕೆ ಯಾವುದೇ ನಷ್ಟವಿಲ್ಲ!
“ಕಾಂಗ್ರೆಸ್ ಪಕ್ಷದಿಂದ ಮೊಯಿದೀನ್ ಬಾವಾ ಮಾತ್ರ ಹೊರಗಡೆ ಹೋಗಿದ್ದಾರೆ. ಅವರ ಜೊತೆ ವೈಯಕ್ತಿಕವಾಗಿ ಹಿಂದಿನಿಂದಲೂ ಇದ್ದ ಬೆರಳೆಣಿಕೆಯ ನಾಯಕರು ಅವರ ಜೊತೆಗಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಜನರು ಬೆಂಬಲ ನೀಡುವುದಿಲ್ಲ. ಬಾವಾ 500-1000 ಮತ ಪಡೆಯಬಹುದು. ನಾವು 10ಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಯಾಗಿದ್ದೆವು.

ಪಕ್ಷ ನನಗೆ ಮಾತ್ರ ಟಿಕೆಟ್ ಕೊಟ್ಟಿದೆ. ಉಳಿದವರು ಇದಕ್ಕಾಗಿ ಪಕ್ಷ ತೊರೆದಿಲ್ಲ, ನನ್ನ ಜೊತೆ ದಿನಾ ಮನೆ ಮನೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಾವಾ ಪಕ್ಷ ತೊರೆದಿದ್ದರಲ್ಲಿ ಯಾವುದೇ ಸಮಸ್ಯೆಯಿಲ್ಲ” ಎಂದು ಇನಾಯತ್ ಅಲಿ ಹೇಳಿದ್ದಾರೆ.

Join Whatsapp
Exit mobile version