ನಾಳೆಯಿಂದ 19 ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಕಾರ್ಯಭಾರ: ರಾಜಭವನ ಕೇಂದ್ರದ ಆಡಳಿತ ಪಕ್ಷದ ಕೈಗೊಂಬೆ ಎನ್ನುವ ಕಳಂಕ ಅಳಿಸುವರೇ?

Prasthutha|

ಬೆಂಗಳೂರು: ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಕೇಂದ್ರದ ಮಾಜಿ ಸಚಿವ ಥಾವರ್ ಚಂದ್ ಗೆಹ್ಲೋಟ್ ಭಾನುವಾರದಿಂದ 19 ನೇ ರಾಜ್ಯಪಾಲರಾಗಿ ಕಾರ್ಯಭಾರ ಮಾಡಲಿದ್ದು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿದ್ದಾರೆಯೇ ಎನ್ನುವ ಚರ್ಚೆ ಆರಂಭಗೊಂಡಿದೆ.

- Advertisement -

ಸಾಮಾಜಿಕ ನ್ಯಾಯ ವಲಯದಲ್ಲಿ ಹೆಚ್ಚಿನ ಕೆಲಸ ಮಾಡಿರುವ ಗೆಹ್ಲೋಟ್ ಅವರ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ರಾಜಭವನದ ಗಾಜಿನ ಮನೆಯಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಕೇಂದ್ರ ಸಚಿವರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಇತ್ತೀಚೆಗಷ್ಟೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಗೆಹ್ಲೋಟ್ ಸಂವಿಧಾನದ ಆಶಯಗಳಂತೆ ಎಲ್ಲರಿಗೂ ನ್ಯಾಯ ದೊರಕಿಸಿಕೊಡುತ್ತಾರೆಯೇ, ರಾಜ್ಯದ ಪ್ರಥಮ ಪ್ರಜೆಯಾಗಿ ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವರೇ ಎನ್ನುವ ಜಿಜ್ಞಾಸೆ ರಾಜ್ಯದ ಜನತೆಯನ್ನು ಕಾಡುತ್ತಿದೆ.


ಇತ್ತೀಚೆಗೆ ತೀವ್ರ ಚರ್ಚೆಗೆ ಒಳಗಾಗುತ್ತಿರುವುದು ರಾಜಭವನದ ಕಚೇರಿ. ಕೇಂದ್ರದಲ್ಲಿನ ಸರ್ಕಾರಗಳ ಅಣತೆಯಂತೆ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಾರೆ ಎನ್ನುವ ಆರೋಪ ಎಲ್ಲಾ ಕಾಲದಲ್ಲೂ ಕೇಳಿ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗಿರುವುದನ್ನು ನೋಡುತ್ತಿದ್ದೇವೆ. ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ರಾಜ ಭವನ ಕಚೇರಿ ಸಂಚಿನ ಕೇಂದ್ರ ಎನ್ನುವ ಆರೋಪಗಳು ಸರ್ವೇ ಸಾಮಾನ್ಯವಾಗಿವೆ. 1992 ರಿಂದ 99 ರ ವರೆಗೆ ಬಹುತೇಕ 8 ವರ್ಷ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಕನ್ನಡ ಕಲಿತಿಲ್ಲ ಎನ್ನುವ ಸಣ್ಣಪುಟ್ಟ ದೂರು ಬಿಟ್ಟರೆ ಬಹುತೇಕ ವಿವಾದಗಳಿಲ್ಲದೇ ಕೆಲಸ ಮಾಡಿದ್ದರು. ರಾಜಭವನ ಕಚೇರಿಯ ಘನತೆಗೆ ತಕ್ಕಂತೆ ಅವರು ನಡೆದುಕೊಂಡಿದ್ದರು. 1999 ರ ಡಿಸೆಂಬರ್ 2 ರಿಂದ 2002 ರ ಆಗಸ್ಟ್ 20 ರ ವರೆಗೆ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಅವರು ರಾಜಭವನವನ್ನು ಜನ ಸ್ನೇಹಿಯಾಗಿ ಮಾಡಿದ್ದರು. ರಾಜಭವನಕ್ಕೆ ಜನ ಸಾಮಾನ್ಯರಿಗೂ ಪ್ರವೇಶ ಕಲ್ಪಿಸಿದ್ದರು. ಸದನದಲ್ಲಿ ರಾಜ್ಯಪಾಲರ ಭಾಷಣವನ್ನು ಕನ್ನಡದಲ್ಲಿ ಓದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.

- Advertisement -

ನಂತರ 2002 ರ ಆಗಸ್ಟ್ 21 ರಿಂದ 2007 ರ ವರೆಗೆ ಟಿ.ಎನ್. ಚತುರ್ವೇದಿ ಅವರು ಸಹ ವಿವಾದಗಳನ್ನು ಮೇಲೆ ಎಳೆದುಕೊಳ್ಳಲಿಲ್ಲ. 2007 ರ ಆಗಸ್ಟ್ 21 ರಿಂದ 2009 ರ ಜೂನ್ 24 ರವರೆಗೆ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಕಾಲದಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಆಗ ತಮ್ಮದೇ ಆದ ರೀತಿಯಲ್ಲಿ ಆಡಳಿತ ನಡೆಸಿದ್ದ ಅವರ ಮೇಲೆ ವರ್ಗಾವಣೆ ಸೇರಿ ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿತ್ತು. ನಂತರ 2009 ರ ಜೂನ್ 24 ರಿಂದ 2014 ರ ಜೂನ್ 29 ರ ವರೆಗೆ ರಾಜ್ಯಪಾಲರಾಗಿದ್ದ ಹನ್ಸರಾಜ್ ಭಾರಧ್ವಜ್ ಅವಧಿ ಅತ್ಯಂತ ವಿವಾದಕ್ಕೆ ಕಾರಣವಾಗಿತ್ತು. ಕೇಂದ್ರದ ಯುಪಿಎ ಆಡಳಿತದಲ್ಲಿ ಕಾಂಗ್ರೆಸ್ ಅಣತಿಯಂತೆ ನಡೆದುಕೊಳ್ಳುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಖಾಸಗಿ ದಾವೆ ಹೂಡಲು ಅನುಮತಿ ನೀಡಿದ್ದರು. ಒಂದು ಕಡೆ ಇದು ದಿಟ್ಟ ನಿರ್ಧಾರ ಎನ್ನುವ ಮೆಚ್ಚುಗೆ ಕೇಳಿ ಬಂದಿತ್ತು. ರಾಜಭವನ ತನ್ನ ಖದರು, ಅಧಿಕಾರವನ್ನು ಪ್ರದರ್ಶಿಸಿದೆ ಎನ್ನುವ ಶ್ಲಾಘನೆಯೂ ವ್ಯಕ್ತವಾಗಿತ್ತು. ಆದರೆ ಭಾರಧ್ವಾಜ್ ಅವರ ನಡೆ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಪ್ರತಿಭಟಿಸಿ ಆಗ ಬಿಜೆಪಿ ರಾಜ್ಯ ಬಂದ್ ಗೂ ಕರೆ ನೀಡಿತ್ತು. ರಾಜ್ಯಪಾಲರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಜತೆಗೆ ರಾಜಭವನವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಇನ್ನು ಹನ್ಸರಾಜ್ ಭಾರಧ್ವಾಜ್ ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಷಣದ ಜತೆಗೆ ಮಾಧ್ಯಮಗಳ ಜತೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರತಿಪಕ್ಷಗಳಿಗೆ ಸರಿ ಸಮಾನವಾಗಿ ಆಡಳಿತ ಪಕ್ಷವನ್ನು ಟೀಕಿಸುತ್ತಿದ್ದರು. ರಾಜಭವನದಲ್ಲಿ ಸುದ್ದಿಗೋಷ್ಠಿಗಳನ್ನು ಸಹ ನಡೆಸುತ್ತಿದ್ದರು. ಭಾರಧ್ವಾಜ್ ಒಂದು ರೀತಿಯಲ್ಲಿ ಕರ್ನಾಟಕದ ವರ್ಣರಂಜಿತ ರಾಜ್ಯಪಾಲರಾಗಿ ಜನ ಮಾನಸದಲ್ಲಿ ನಿಲ್ಲುತ್ತಾರೆ. ನಂತರ 2014 ರ ಜೂನ್ 29 ರಿಂದ ಆಗಸ್ಟ್ 31 ರವರೆಗೆ 63 ದಿನಗಳ ಕಾಲ ಕೆ. ರೋಸಯ್ಯ ರಾಜ್ಯಪಾಲರಾಗಿದ್ದರು. ನಂತರ ವಜೂಭಾಯಿ ವಾಲಾ 6 ವರ್ಷ 312 ದಿನಗಳ ಕಾಲ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು. ಕಳೆದ ವಿಧಾನ ಸಭೆ ಚುನಾವಣೆ ನಂತರ ಯಾರಿಗೂ ಬಹುಮತ ದೊರೆಯದಿದ್ದಾಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು, ಬಹುಮತ ಸಾಬೀತುಪಡಿಸಲು ಹೆಚ್ಚಿನ ಆತುರ, ಮುತುವರ್ಜಿ ವಹಿಸಿದ್ದರು. ಇವರು ಬಿಜೆಪಿ ಪಕ್ಷಪಾತಿ, ರಾಜಭವನ ಬಿಜೆಪಿ ಭವನವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಇದಿಗ ವಜೂಭಾಯಿ ವಾಲಾ ಅವರ ಅಧ್ಯಾಯ ಮುಗಿದಿದೆ.


ಇದೀಗ ಮಾಜಿ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರ ಅವಧಿ. ಗೆಹ್ಲೋಟ್ ಮಧ್ಯಪ್ರದೇಶದ ನಾಗ್ದಾ ತಾಲೂಕಿನ ರೂಪೇಟಾ ದಲ್ಲಿ 1948ರ ಮೇ 18ರಂದು ಜನಿಸಿದರು. ಮಧ್ಯಪ್ರದೇಶದ ಉಜ್ಜಯನಿಯ ವಿಕ್ರಮ್ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ಗೆಹ್ಲೋಟ್ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
1996ರಿಂದ 2009ರ ವರೆಗೆ ಶಾಜಾಪುರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಗೆಹ್ಲೋಟ್ ಅವರು, ಮೂರು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದ ಗೆಹ್ಲೋಟ್ ಅವರು, 2014ರಿಂದ ಇಲ್ಲಿಯವರೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯಸಭೆಯಲ್ಲಿ ಅವರು ಸಭಾನಾಯಕರಾಗಿದ್ದರು. ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಗೆಹ್ಲೋಟ್ ಅವರು, ಸಮಾಜದ ಶೋಷಿತ ವರ್ಗಗಳಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕೃಷಿ, ಕಾರ್ಮಿಕ, ಎಸ್ ಸಿ, ಎಸ್ಟಿ ಕಲ್ಯಾಣ ಸೇರಿದಂತೆ ವಿವಿಧ ಸಂಸದೀಯ ಸಮಿತಿಯ ಸದಸ್ಯರಾಗಿಯೂ ಗೆಹ್ಲೋಟ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭೆ ವತಿಯಿಂದ ಪ್ರಕಟಿಸಲಾಗುವ ‘ವಿಧಾಯಿನಿ’ನಿಯತಕಾಲಿಕಕ್ಕೆ ಶೋಷಿತರ ಅಭಿವೃದ್ಧಿ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅನೇಕ ಸಾಂಸ್ಕೃತಿಕ, ಸಾಮಾಜಿಕ , ಶಿಕ್ಷಣ, ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದರು. ಯುವ ವಯಸ್ಸಿನಿಂದಲೇ ಕಾರ್ಮಿಕ ಚಳವಳಿಗಳಲ್ಲೂ ಪಾಲ್ಗೊಂಡಿದ್ದ ಗೆಹ್ಲೋಟ್ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉಜ್ಜಯನಿಯಲ್ಲಿ ಜೈಲು ವಾಸ ಅನುಭವಿಸಿದ್ದರು. 1962ರಲ್ಲಿ ಭಾರತೀಯ ಜನಸಂಘ ಸೇರ್ಪಡೆಯಾಗಿದ್ದ ಗೆಹ್ಲೋಟ್ ಅವರು, ಮಧ್ಯ ಪ್ರದೇಶ ಬಿಜೆಪಿ ಘಟಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಕ್ಷದ ವಿವಿಧ ಉನ್ನತ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಜೀವನವನ್ನು ಆರಂಭಿಸಿದ ಗೆಹ್ಲೋಟ್ ಅವರು, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿದ್ದಾಗ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಅಪಾರ ಕೆಲಸ ಮಾಡಿದ್ದಾರೆ. ಬಿಜೆಪಿ ಹಿರಿಯ ನಾಯಕರಾದ ಗೆಹ್ಲೋಟ್ ಅವರು, ಬಿಜೆಪಿ ಸಂಸದೀಯ ಮಂಡಳಿಯ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೂ ಆಗಿದ್ದರು. ಅಮೆರಿಕ, ದಕ್ಷಿಣ ಆಫ್ರಿಕಾ, ಚೈನಾ, ಆಸ್ಟ್ರೇಲಿಯಾ ದೇಶಗಳಿಗೆ ಗೆಹ್ಲೋಟ್ ಅವರು ಅಧಿಕೃತ ಪ್ರವಾಸಗಳನ್ನು ಕೈಗೊಂಡಿದ್ದಾರೆ. 2006ರಿಂದ 2014ರವರೆಗೆ ಎರಡು ಬಾರಿ ಕರ್ನಾಟಕದ ಬಿಜೆಪಿ ಉಸ್ತುವಾರಿಗಳಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಇಲ್ಲಿನ ರಾಜಕಾರಣ, ಬೌಗೋಳಿಕ ಪರಿಸ್ಥಿತಿಯನ್ನು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಸಾಮಾಜಿಕ ನ್ಯಾಯದ ವಿಷಯವನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ನೂತನ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರಾಜಕೀಯವನ್ನು ಬದಿಗೊತ್ತಿ, ಕೇಂದ್ರದ ಆದೇಶಗಳಿಗೆ ಗೋಣು ಆಡಿಸದೇ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವ ನಿರೀಕ್ಷೆಯನ್ನು ರಾಜ್ಯದ ಜನತೆ ಇಟ್ಟುಕೊಂಡಿದ್ದಾರೆ. ರಾಜಭವನ ಕೇಂದ್ರ ಸರ್ಕಾರದ ಆಡಳಿತ ಪಕ್ಷಗಳ ಕೈಗೊಂಬೆ ಎನ್ನುವ ಕಳಂಕವನ್ನು ಅಳಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

Join Whatsapp