Home ಟಾಪ್ ಸುದ್ದಿಗಳು ತೆಲಂಗಾಣ| ಪ್ರಜಾ ಸಂಗ್ರಾಮ ಯಾತ್ರೆಯನ್ನು ತಡೆದು ಬಿಜೆಪಿ ಸಂಸದನನ್ನು ಗೃಹ ಬಂಧನದಲ್ಲಿರಿಸಿದ ಪೊಲೀಸರು

ತೆಲಂಗಾಣ| ಪ್ರಜಾ ಸಂಗ್ರಾಮ ಯಾತ್ರೆಯನ್ನು ತಡೆದು ಬಿಜೆಪಿ ಸಂಸದನನ್ನು ಗೃಹ ಬಂಧನದಲ್ಲಿರಿಸಿದ ಪೊಲೀಸರು

ಹೈದರಾಬಾದ್: ಐದನೇ ಹಂತದ ಪ್ರಜಾ ಸಂಗ್ರಾಮ ಯಾತ್ರೆ ಕೈಗೊಳ್ಳಲು ಮುಂದಾಗಿದ್ದ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂದಿ ಸಂಜಯ್‌ ಕುಮಾರ್‌ ಅವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ.


ಸೋಮವಾರ ಭೈನ್ಸಾದಿಂದ ಆರಂಭವಾಗಬೇಕಿದ್ದ ಪ್ರಜಾ ಸಂಗ್ರಾಮ ಯಾತ್ರೆಗೆ ಭಾನುವಾರ ರಾತ್ರಿ ಕರೀಂನಗರದಿಂದ ತೆರಳುತ್ತಿದ್ದವೇಳೆ ಜಗ್ತಿಯಾಲ್‌ ಬಳಿ ತಡೆದ ಪೊಲೀಸರು ಯಾತ್ರೆಗೆ ಅನುಮತಿ ನಿರಾಕರಿಸಿದ್ದಾರೆ.


ಕೋಮು ಸೂಕ್ಷ್ಮ ಪ್ರದೇಶವಾಗಿರುವ ಭೈನ್ಸಾ ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಕೋಮುಗಲಭೆಗಳಿಗೆ ಸಾಕ್ಷಿಯಾಗಿದೆ. ಪ್ರಜಾ ಸಂಗ್ರಾಮ ಪಾದಯಾತ್ರೆಯಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಪೊಲೀಸರು ಮಾರ್ಗ ಮಧ್ಯೆಯೇ ಸಂಜಯ್‌ ಅವರನ್ನು ತಡೆದು ಕರೀಂನಗರಕ್ಕೆ ವಾಪಸ್ ಕರೆತಂದಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಕರೀಂನಗರ ಸಂಸದ ಸಂಜಯ್‌, ಆರಂಭದಲ್ಲಿ ಪೊಲೀಸರು ಪಾದಯಾತ್ರೆಗೆ ಅನುಮತಿ ನೀಡಿದ್ದರು. ಆದರೆ, ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡ ನಂತರ ಅನುಮತಿ ಹಿಂಪಡೆದಿ ದ್ದಾರೆ. ಭೈನ್ಸಾ ಸೂಕ್ಷ್ಮ ಪ್ರದೇಶ, ನಿಷೇಧಿತ ವಲಯ ಎಂದು ಹೇಳುತ್ತಿದ್ದಾರೆ. ಪೊಲೀಸರ ಕ್ರಮವನ್ನು ಪ್ರಶ್ನಿಸಿ ಪಕ್ಷವು ಹೈಕೋರ್ಟ್‌ ಮೆಟ್ಟಿಲೇರಲಿದೆ ಎಂದು ಹೇಳಿದರು.


ಸಂಜಯ್‌ ಅವರನ್ನು ಜಗ್ತಿಯಾಲ್‌ ಬಳಿ ತಡೆದಾಗ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಕ್ರಮವನ್ನು ಖಂಡಿಸಿ ಜಗ್ತಿಯಾಲ್‌, ಕೊರುತ್ಲಾ, ನಿರ್ಮಲ್‌ ಹಾಗೂ ಕರಿಂನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Join Whatsapp
Exit mobile version