Home ಟಾಪ್ ಸುದ್ದಿಗಳು ಭೈನ್ಸ ಗಲಭೆಗೆ ಕಾರಣ ಹಿಂದೂ ವಾಹಿನಿ ಸಂಘಟನೆ : ತೆಲಂಗಾಣ ಪೊಲೀಸ್

ಭೈನ್ಸ ಗಲಭೆಗೆ ಕಾರಣ ಹಿಂದೂ ವಾಹಿನಿ ಸಂಘಟನೆ : ತೆಲಂಗಾಣ ಪೊಲೀಸ್

ಹೈದರಾಬಾದ್: ತೆಲಂಗಾಣದ ಭೈನ್ಸ ಗಲಭೆಗೆ ಹಿಂದೂ ವಾಹಿನಿ ಕಾರಣ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ತೀವ್ರ ಹಿಂದುತ್ವ ಸಂಘಟನೆಯಾದ ಹಿಂದೂ ವಾಹಿನಿಯ ಸದಸ್ಯರಾದ ತೋಟ್ಟ ಮಹೇಶ್ ಮತ್ತು ದತ್ತು ಪಟೇಲ್ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ತೆಲಂಗಾಣ ಇನ್ಸ್’ಪೆಕ್ಟರ್ ಜನರಲ್ ಆಫ್ ಪೊಲೀಸ್ (ಉತ್ತರ ವಲಯ) ವೈ ನಾಗಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 7 ರಂದು ಭೈನ್ಸ ಪಟ್ಟಣದಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಪೊಲೀಸರು ಸೇರಿದಂತೆ 12 ಜನರು ಗಾಯಗೊಂಡಿದ್ದರು. ನಾಲ್ಕು ಮನೆಗಳು, 13 ಅಂಗಡಿಗಳು, ನಾಲ್ಕು ಆಟೋರಿಕ್ಷಾಗಳು, ಆರು ಕಾರುಗಳು ಮತ್ತು ಐದು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಬಂಧಿತ ಹಿಂದೂ ವಾಹಿನಿ ಜಿಲ್ಲಾಧ್ಯಕ್ಷ ಸಂತೋಷ್ ಈ ಹಿಂಸಾಚಾರದ ನೇತೃತ್ವ ವಹಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ದಿನ ರಾತ್ರಿ 8.20 ರ ಸುಮಾರಿಗೆ ತಮ್ಮ ಸ್ನೇಹಿತರೊಂದಿಗೆ ಝುಲ್ಫಿಕರ್ ಮಸೀದಿ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಿಜ್ವಾನ್ ಅವರಿಗೆ ಬೈಕ್ ಓಡಿಸುತ್ತಿದ್ದ ದತ್ತು ಪಟೇಲ್ ಮತ್ತು ತೊಟ್ಟ ಮಹೇಶ್ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರು. ನಂತರ, ರಿಜ್ವಾನ್ ಮತ್ತು ಆತನ ಸ್ನೇಹಿತರು ಇಬ್ಬರನ್ನು ಹುಡುಕಿ ಹೊರಟಾಗ ಅವರ ಮೇಲೆ ಹಿಂದೂ ವಾಹಿನಿ ಸದಸ್ಯರು ಹಲ್ಲೆ ನಡೆಸಿದ್ದರು. ದತ್ತು ಪಟೇಲ್ ಮತ್ತೆ ಜುಲ್ಫಿಕರ್ ಮಸೀದಿಯ ಬಳಿ ಹಿಂಸೆಗೆ ಇಳಿದಿದ್ದು ಎರಡು ಧರ್ಮಗಳ ನಡುವೆ ಘರ್ಷಣೆಗೆ ಕಾರಣವಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ವಾಹಿನಿ ಸದಸ್ಯರು ಕ್ಷುಲ್ಲಕ ಘಟನೆಯನ್ನು ಕೋಮು ಗಲಭೆಯಾಗಿ ಪರಿವರ್ತಿಸಿದ್ದಾರೆ. ನಂತರ ಕೌನ್ಸಿಲರ್‌ಗಳಾದ ಎಐಐಎಂ ಮುಖಂಡ ಅಬ್ದುಲ್ ಕಬೀರ್ ಮತ್ತು ಹಿಂದೂ ವಾಹಿನಿಯ ಮಾಜಿ ಸದಸ್ಯ ತೊಟ್ಟ ವಿಜಯ್ ಎರಡೂ ಗುಂಪುಗಳನ್ನು ಸೇರಿಸಿ ಹಿಂಸಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version