Home ಟಾಪ್ ಸುದ್ದಿಗಳು ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷಕ್ಕೆ ಚಾಲನೆ : ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷಕ್ಕೆ ಚಾಲನೆ : ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.

“ತೆಲಂಗಾಣ ಚಳವಳಿ ಆರಂಭಕ್ಕೂ ಮುನ್ನ ನಾವು ಮಾಡಿದಂತೆ ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸುದೀರ್ಘ ಚರ್ಚೆಯ ನಂತರ ಪರ್ಯಾಯ ರಾಷ್ಟ್ರೀಯ ಕಾರ್ಯಸೂಚಿಯ ಬಗ್ಗೆ ಒಮ್ಮತ ಮೂಡಿದೆ. ರಾಷ್ಟ್ರೀಯ ಪಕ್ಷದ ರಚನೆ ಮತ್ತು ಅದರ ನೀತಿಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ ” ಎಂದು ಕೆಸಿಆರ್ ಅವರ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಹಲವು ತಿಂಗಳುಗಳಿಂದ ಕೆಸಿಆರ್ ಅವರು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸಲು ಉತ್ಸುಕರಾಗಿದ್ದಾರೆ ಎಂಬ ಸುಳಿವನ್ನು ನೀಡುತ್ತಾ ಬಂದಿದ್ದಾರೆ. ಈ ವರ್ಷದ ಏಪ್ರಿಲ್ ನಲ್ಲಿ ನಡೆದ ಟಿಆರ್ ಎಸ್ ಸರ್ವಸದಸ್ಯರ ಸಭೆಯಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಗೆ ರಾಷ್ಟ್ರೀಯ ಪರ್ಯಾಯದ ಅಗತ್ಯವಿದೆ. ತಮ್ಮ ಪಕ್ಷದ ಸಹೋದ್ಯೋಗಿಗಳು ರಾಷ್ಟ್ರೀಯ ಪಕ್ಷವನ್ನು ರಚಿಸಲು ಪ್ರೋತ್ಸಾಹಿಸುತ್ತಿದ್ದಾರೆ ಎಂದೂ ಕೆಸಿಆರ್ ಹೇಳಿದ್ದರು.

ಪಕ್ಷ ರಚನೆಯಾದ ನಂತರ, ರಾವ್ ಅವರು ಪಕ್ಷದ ಸಮಿತಿಗಳನ್ನು ರಚಿಸಲು ಮತ್ತು ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಲು ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ಬಿಜೆಪಿಯೇತರ ಪಕ್ಷಗಳ ನಾಯಕರ  ಭೇಟಿ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಪಾದಾರ್ಪಣೆ ಮಾಡಬಹುದು.  ಹೊಸ ಪಕ್ಷವು ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪಕ್ಷದ ಮೂಲಗಳು  ತಿಳಿಸಿವೆ.

Join Whatsapp
Exit mobile version