Home ಟಾಪ್ ಸುದ್ದಿಗಳು ನಾವೇ ಸರಕಾರ ರಚಿಸುತ್ತೇವೆ, ಸ್ವಲ್ಪ ಕಾಯಿರಿ ಎಂದ ತೇಜಸ್ವಿ ಯಾದವ್ ಮುಂದಿನ ನಡೆಯೇನು?

ನಾವೇ ಸರಕಾರ ರಚಿಸುತ್ತೇವೆ, ಸ್ವಲ್ಪ ಕಾಯಿರಿ ಎಂದ ತೇಜಸ್ವಿ ಯಾದವ್ ಮುಂದಿನ ನಡೆಯೇನು?

ಪಾಟ್ನಾ : ಬಿಹಾರದಲ್ಲಿ ಆರ್ ಜೆಡಿ ನೇತ್ವದ ಮಹಾಘಟಬಂಧನ್ ಮೈತ್ರಿಕೂಟ ಸರಕಾರ ರಚಿಸಲಿದೆ ಎಂದು ಪಕ್ಷದ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರು, ಶಾಸಕರನ್ನುದ್ದೇಶಿಸಿ ಮಾತನಾಡಿದ ಅವರು ಕೆಲವು ದಿನಗಳ ಮಟ್ಟಿಗೆ ಕಾಯುವಂತೆ ಸೂಚಿಸಿದ್ದಾರೆ.

ಹೊಸದಾಗಿ ಆಯ್ಕೆಯಾದ ಆರ್ ಜೆಡಿ ಶಾಸಕರು ಎಲ್ಲರೂ ಪಾಟ್ನಾದಲ್ಲೇ ಉಳಿಯುವಂತೆ ಅವರು ಕರೆ ನೀಡಿದ್ದಾರೆ. ಯಾರೂ ತಮ್ಮ ಕ್ಷೇತ್ರಗಳಿಗೆ ಸದ್ಯಕ್ಕೆ ತೆರಳುವುದು ಬೇಡ ಎಂದು ಹೇಳಿದ್ದಾರೆ. ಜೆಡಿಯು ನೇತೃತ್ವದ ಎನ್ ಡಿಎ ಸರಕಾರ ರಚನೆಯಾದ ಬಳಿಕ, ಅದರಲ್ಲಿ ಎಚ್ ಎಎಂ ಮತ್ತು ವಿಐಪಿ ಶಾಸಕರಿಗೆ ಯಾವ ಸ್ಥಾನಮಾನಗಳು ಸಿಗುತ್ತವೆ ಎಂದು ಆರ್ ಜೆಡಿ ಕಾದು ನೋಡಲಿದೆ ಎಂದು ಅವರು ಹೇಳಿದ್ದಾರೆ.

ತೇಜಸ್ವಿ ಅವರ ಈ ಮಾತುಗಳನ್ನು ಗಮನಿಸಿದರೆ, ಬಹುಮತಕ್ಕಿಂತ ಸ್ವಲ್ಪವೇ ಹೆಚ್ಚು ಸ್ಥಾನಗಳನ್ನು ಹೊಂದಿರುವ ಎನ್ ಡಿಎ ಮೈತ್ರಿಕೂಟದಿಂದ ಕೆಲವು ಶಾಸಕರನ್ನು ಸೆಳೆದು, ಮಹಾಘಟಬಂಧನ್ ಸರಕಾರ ರಚಿಸುವ ಮುನ್ಸೂಚನೆಗಳು ಲಭ್ಯವಾಗುತ್ತಿದೆ.

ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ತೇಜಸ್ವಿ, ಜನತೆಯ ಆಯ್ಕೆ ಮಹಾಘಟಬಂಧನ್ ಆಗಿತ್ತು, ಆದರೆ ಚುನಾವಣಾ ಆಯೋಗದ ನಿರ್ಧಾರ ಎನ್ ಡಿಎ ಪರವಾಗಿತ್ತು ಎಂದಿದ್ದಾರೆ. ಚುನಾವಣಾ ಆಯೋಗದ ಮತ ಎಣಿಕೆ ಪ್ರಕ್ರಿಯೆಯ ದೋಷಗಳನ್ನು ಅವರು ಎತ್ತಿಹಿಡಿದು ತೋರಿಸಿದ್ದಾರೆ.

ಅಂಚೆ ಮತ ಎಣಿಕೆಯಲ್ಲಿ ವಂಚನೆ ಮಾಡಲಾಗಿದೆ. ಕಡಿಮೆ ಅಂತರದಲ್ಲಿ ಪಕ್ಷಕ್ಕೆ ಸೋಲಾಗಿರುವ 20 ಕ್ಷೇತ್ರಗಳಲ್ಲಿ ಮರು ಎಣಿಕೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಹಣ, ತೋಳ್ಬಲ, ತಂತ್ರಗಾರಿಕೆಗಳನ್ನು ಬಳಸಿಯೂ 31 ವರ್ಷದ ಈ ಯುವಕ(ತೇಜಸ್ವಿ ಯಾದವ್)ನನ್ನು ನಿಲ್ಲಿಸಲಾಗಲಿಲ್ಲ. ಆರ್ ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ. ನಿತೀಶ್ ಕುಮಾರ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದು ತೇಜಸ್ವಿ ಹೇಳಿದ್ದಾರೆ.

ನಿತೀಶ್ ಕುಮಾರ್ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಿರಬಹುದು, ಆದರೆ ಆರ್ ಜೆಡಿ ಜನರ ಮನಸ್ಸಿನಲ್ಲಿ ಕುಳಿತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Join Whatsapp
Exit mobile version