Home ಟಾಪ್ ಸುದ್ದಿಗಳು ಪ್ರತಿಭಟನಕಾರರ ಮೇಲೆ ಅಶ್ರುವಾಯು: ಓರ್ವ ರೈತ ಸಾವು

ಪ್ರತಿಭಟನಕಾರರ ಮೇಲೆ ಅಶ್ರುವಾಯು: ಓರ್ವ ರೈತ ಸಾವು

ಚಂಡೀಗಢ: ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖನೌರಿಯಲ್ಲಿ ಪ್ರತಿಭಟನಾ ನಿರತ ರೈತರೋರ್ವರು ಮೃತರಾಗಿದ್ದಾರೆ. ಹರಿಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ್ದು, ಘರ್ಷಣೆಯಲ್ಲಿ 21 ವರ್ಷದ ರೈತ ಸಾವನ್ನಪ್ಪಿದ್ದಾರೆ ಮತ್ತು ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತಪಟ್ಟ ರೈತನನ್ನು ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಸುಭಕರನ್ ಸಿಂಗ್(21) ಎಂದು ಗುರುತಿಸಲಾಗಿದೆ ಎಂದು ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ಅವರು ತಿಳಿಸಿದ್ದಾರೆ. ಫೆಬ್ರವರಿ 13 ರಂದು ‘ದೆಹಲಿ ಚಲೋ’ ಮೆರವಣಿಗೆ ಪ್ರಾರಂಭವಾದ ನಂತರ ನಡೆದ ಘರ್ಷಣೆಯಲ್ಲಿ ಮೊದಲ ಸಾವು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ ಪಂಜಾಬ್‌ನ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದು, ರೈತರು ಬ್ಯಾರಿಕೇಡ್‌ಗಳ ಕಡೆಗೆ ಹೋಗಲು ಪ್ರಯತ್ನಿಸಿದಾಗ ಘರ್ಷಣೆ ಸಂಭವಿಸಿದೆ. ಯುವ ರೈತನ ಸಾವಿನಿಂದಾಗಿ ದೆಹಲಿ ಚಲೋ ಸ್ಥಗಿತಗೊಳಿಸಲಾಗಿದೆ.

ಘರ್ಷಣೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಖನೌರಿ ಗಡಿ ಭಾಗದಿಂದ ಆಸ್ಪತ್ರೆಗೆ ಕರೆತರಲಾಗಿತ್ತು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅವರ(ಸಿಂಗ್) ತಲೆಗೆ ಗಂಭೀರ ಗಾಯವಾಗಿತ್ತು. ಉಳಿದ ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಪಟಿಯಾಲ ಮೂಲದ ರಾಜೀಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್‌ಎಸ್ ರೇಖಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Join Whatsapp
Exit mobile version