ಗೆಲ್ಲಲೇ ಬೇಕಿದ್ದ ಒತ್ತಡಕ್ಕೆ ಸಿಲುಕಿದ್ದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ
ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಿಷಭ್ ಪಂತ್ ಬಳಗ ಆರಂಭಿಕರಿಬ್ಬರ ಅರ್ಧಶತಕಗಳ ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು. ಸವಾಲಿನ ಗುರಿಯನ್ನು ಬೆನ್ನಟ್ಟುವ ವೇಳೆ ಹರ್ಷಲ್ ಪಟೇಲ್ ಮತ್ತು ಚಾಹಲ್ ಬೌಲಿಂಗ್ ಗೆ ಬೆದರಿದ ಆಫ್ರಿಕಾ,19.1 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವ ಪತನ ಕಂಡಿತು.
ಈ ಗೆಲುವಿನಿಂದಿಗೆ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ, ಗೆಲುವಿನ ಖಾತೆ ತೆರೆದಿದೆ. ಮಂಗಳವಾರದ ಪಂದ್ಯ ಸೋತರೂ ಆಫ್ರಿಕಾ, 2-1 ಅಂತರದಲ್ಲಿ ಮುನ್ನಡೆಯಲ್ಲಿದೆ.
ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಹರ್ಷಲ್ ಪಟೇಲ್, ತನ್ನ 4 ಓವರ್‌ಗಳ ದಾಳಿಯಲ್ಲಿ 25 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಯಜುವೇಂದ್ರ ಚಾಹಲ್ 20 ರನ್ ನೀಡಿ ಮೂರು ವಿಕೆಟ್ ಪಡೆದರು.
ಆಫ್ರಿಕಾ ಪರ 29 ರನ್ ಗಳಿಸಿದ ಹೆನ್ರಿಕ್ ಕ್ಲಾಸೆನ್ ಟಾಪ್ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಹೆಂಡ್ರಿಕ್ಸ್ 23 ಮತ್ತು ವೇಯ್ನ್ ಪಾರ್ನೆಲ್ 22 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದ್ದರು. ಗಾಯಕ್ವಾಡ್ 57 ರನ್ ಗಳಿಸಿದರೆ, ಕಿಶನ್ 54 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕಳಪೆ ಫಾರ್ಮ್ ಮುಂದುವರಿಸಿದ ಕ್ಯಾಪ್ಟನ್ ಪಂತ್, 6 ರನ್ ಗಳಿಸಿ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯಾ 31 ರನ್ ಗಳಿಸಿ ಅಜೇಯರಾಗುಳಿದರು.
ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಪ್ರಿಟೋರಿಯಸ್ 2 ಮತ್ತು ಕಗಿಸೊ ರಬಡಾ, ಶಮ್ಸಿ ಕೇಶವ್ ಮಹರಾಜ್ ತಲಾ 1 ವಿಕೆಟ್ ಪಡೆದರು.