Home ಟಾಪ್ ಸುದ್ದಿಗಳು ವಿಶ್ವಕಪ್‌ ಗೆದ್ದ ಒಂದೇ ವಾರದಲ್ಲಿ ಜಿಂಬಾಬ್ವೆ ವಿರುದ್ಧ ಸೋಲು ಕಂಡ ಟೀಮ್‌ ಇಂಡಿಯಾ

ವಿಶ್ವಕಪ್‌ ಗೆದ್ದ ಒಂದೇ ವಾರದಲ್ಲಿ ಜಿಂಬಾಬ್ವೆ ವಿರುದ್ಧ ಸೋಲು ಕಂಡ ಟೀಮ್‌ ಇಂಡಿಯಾ

ಹರಾರೆ: ಟಿ20 ವಿಶ್ವಕಪ್‌ ಟ್ರೋಫಿ ಗೆದ್ದ ಒಂದೇ ವಾರದಲ್ಲಿ ಟೀಮ್‌ ಇಂಡಿಯಾ ಆಡಿದ ಪಂದ್ಯದಲ್ಲಿ ಸೋಲು ಕಂಡಿದೆ. ಶುಭ್‌ಮನ್‌ ಗಿಲ್‌ ನೇತೃತ್ವದಲ್ಲಿ ಹರಾರೆಗೆ ಪ್ರಯಾಣ ಮಾಡಿದ್ದ ಟೀಮ್‌ ಇಂಡಿಯಾ ತಂಡ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಪರಾಭವಗೊಂಡಿದೆ.

ಜಿಂಬಾಬ್ವೆಯಿಂದ 116 ರನ್ ಗುರಿ ಪಡೆದ ಭಾರತ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ರುತುರಾಜ್ ಗಾಯಕವಾಡ, ರಿಯಾನ್ ಪರಾಗ್‌, ರಿಂಕು ಸಿಂಗ್‌, ಧ್ರುವ್ ಜುರೆಲ್ ಕೂಡ ಬೇಗನೇ ಪೆವಿಲಿಯನ್‌ ಸೇರಿದರು.

ಜಿಂಬಾಬ್ವೆ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ನಾಯಕ ಶುಭಮನ್ ಗಿಲ್ ಮಾತ್ರ 31 ರನ್ ಗಳಿಸಿದರು. ಸಿಕಂದರ್ ರಾಜಾ ಎಸೆತದಲ್ಲಿ ಬೌಲ್ಡ್ ಆಗಿ ಅವರು ಪೆವಿಲಿಯನ್ ಸೇರಿದರು. ರವಿ ಬಿಷ್ಣೋಯಿ 9, ಆವೇಶ್ ಖಾನ್ 16 ರನ್ ಗಳಿಸಿದರು. ಮುಕೇಶ್ ಕುಮಾರ್‌ ಖಾತೆ ತೆರೆಯಲು ವಿಫಲರಾದರು. ಕೊನೆವರೆಗೂ ಪ್ರತಿರೋಧ ತೋರಿದ ವಾಷಿಂಗ್ಟನ್ ಸುಂದರ್‌ 27 ರನ್ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವು ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ತುತ್ತಾಗಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್‌ ಗಳಿಸಿತ್ತು.ವೆಸ್ಲೇ ಮಾಧೆವೆರೆ 21, ಬ್ರಿಯಾಬ್ ಬೆನೆಟ್‌ 23, ನಾಯಕ ಸಿಕಂದರ್ ರಾಜಾ 17, ಡಿಯಾನ್ ಮೇಯರ್ಸ್ 23 ಹಾಗೂ ವಿಕೆಟ್ ಕೀಪರ್‌ ಕ್ಲೈವ್ ಮಡಾಂಡೆ ಅಜೇಯ 29 ರನ್ ಗಳಿಸಿದ್ದಾರೆ.

ಭಾರತದ ಪರ ರವಿ ಬಿಷ್ಣೋಯಿ 4 ಓವರ್‌ಗಳಲ್ಲಿ ಕೇವಲ 13 ರನ್ ನೀಡಿ 4 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ 4 ಓವರ್‌ಗಳಲ್ಲಿ 11 ರನ್‌ ನೀಡಿ 2 ವಿಕೆಟ್‌ ಗಳಿಸಿದ್ದರು. ಆವೇಶ್‌ ಖಾನ್‌ ಹಾಗೂ ಮುಕೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದಿದ್ದರು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಜಿಂಬಾಬ್ವೆ ತಂಡವು 6 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಚೇತರಿಸಿಕೊಂಡಂತೆ ಕಂಡರೂ, ಸ್ಪಿನ್ ದಾಳಿ ಮುಂದೆ ಬ್ಯಾಟರ್‌ಗಳು ಮಂಕಾದರು.

Join Whatsapp
Exit mobile version