Home ಟಾಪ್ ಸುದ್ದಿಗಳು ಐಸಿಸಿ ರಾಂಕಿಂಗ್ : ಮೂರೂ ಮಾದರಿಯಲ್ಲೂ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ!

ಐಸಿಸಿ ರಾಂಕಿಂಗ್ : ಮೂರೂ ಮಾದರಿಯಲ್ಲೂ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ!

ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್​ಗಳಿಂದ ಮಣಿಸಿದ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದೆ.

ಈ ಗೆಲುವಿನೊಂದಿಗೆ ಏಕದಿನ ಮಾದರಿಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿರುವ ಭಾರತ ತಂಡವು ಇದೀಗ ಮೂರೂ ಮಾದರಿಗಳಲ್ಲೂ ಅಂದರೆ, ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದೆ.

ಈ ಪಂದ್ಯಕ್ಕೂ ಮೊದಲು ಭಾರತ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಬಹಳ ದಿನಗಳಿಂದ ನಂ.1 ಸ್ಥಾನದಲ್ಲಿತ್ತು. ಆದರೆ ಏಕದಿನ ಸರಣಿಯಲ್ಲಿ ಮಾತ್ರ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ನಡುವೆ ನಂ.1 ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೀಗ ಕಾಂಗರೂಗಳ ಹೆಡೆಮುರಿ ಕಟ್ಟಿರುವ ಭಾರತ, ಈ ಮೊದಲು ನಂಬರ್ 1 ಏಕದಿನ ತಂಡವೆನಿಸಿಕೊಂಡಿದ್ದ ಪಾಕಿಸ್ತಾನವನ್ನು ನಂಬರ್-1 ಸ್ಥಾನದಿಂದ ಕೆಳಗಿಳಿಸಿದೆ.

ಮೂರೂ ಮಾದರಿಯಲ್ಲಿ ಭಾರತ ನಂ.1

ಪ್ರಸ್ತುತ ಭಾರತವು ಟಿ20 ಮಾದರಿಯಲ್ಲಿ 264 ರೇಟಿಂಗ್‌ನೊಂದಿಗೆ 1 ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 261 ರೇಟಿಂಗ್‌ನೊಂದಿಗೆ 2 ನೇ ಸ್ಥಾನದಲ್ಲಿದೆ. ಟೆಸ್ಟ್‌ನಲ್ಲಿ ಭಾರತ 118 ರೇಟಿಂಗ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಕೂಡ ಅದೇ ಅಂಕಗಳನ್ನು ಹೊಂದಿದೆ ಆದರೆ ಎರಡನೇ ಸ್ಥಾನದಲ್ಲಿದೆ. ಏಕದಿನ ಮಾದರಿಯಲ್ಲಿ ಈ ಮೊದಲು ಪಾಕಿಸ್ತಾನ ನಂಬರ್-1 ಆಗಿತ್ತು. ಆದರೆ ಏಷ್ಯಾಕಪ್‌ನಲ್ಲಿ ಹೀನಾಯ ಸೋಲಿನ ನಂತರ ಪಾಕ್ ತಂಡದ ನಂಬರ್-1  ಸ್ಥಾನ ಅಪಾಯದಲ್ಲಿತ್ತು.

ಮೊದಲು ಏಷ್ಯಾಕಪ್ ಗೆದ್ದ ಟೀಂ ಇಂಡಿಯಾ ನಂತರ ಮೊಹಾಲಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಹೀಗಾಗಿ 116 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಭಾರತ ನಂಬರ್ 1 ಸ್ಥಾನಕ್ಕೇರಿದರೆ, ಪಾಕಿಸ್ತಾನವು 115 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಹೊಸ ಮೈಲುಗಲ್ಲು ಸಾಧಿಸಿದ್ದು, ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.

Join Whatsapp
Exit mobile version