ಮಂಗಳೂರು: ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತಾನು ವಾಸಿಸುತ್ತಿದ್ದ ಪಿ.ಜಿ.ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಿ, ಇದಕ್ಕೆ ಕಾರಣಕರ್ತನಾದ ಕಾಲೇಜಿನ ಅಧ್ಯಾಪಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಂತ್ರಸ್ತ ಕುಟುಂಬಕ್ಕೆ ಸರಕಾರ ಪರಿಹಾರ ಧನ ನೀಡಬೇಕು ದ.ಕ. ಜಿಲ್ಲಾ ಎಸ್.ಐ.ಒ. ಒತ್ತಾಯಿಸಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಬೆಂಗಳೂರುಕುಮಾರಸ್ವಾಮಿ ಬಡಾವಣೆಯ ಭರತ್ ಭಾಸ್ಕರ್ (20) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ತಾಯಿಗೆ ಕಳುಹಿಸಿದ್ದ ವಾಟ್ಸ್‌ಆ್ಯಪ್ ಸಂದೇಶದಲ್ಲಿ “ಡೊನೇಶನ್ ನೀಡಿದರೂ ಕಾಲೇಜಿನಲ್ಲಿ ವ್ಯವಸ್ಥೆ ಸರಿಯಿಲ್ಲ. ಕಾಲೇಜಿನ ಅಧ್ಯಾಪಕರೊಬ್ಬರು ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿಯಿಲ್ಲ ಎಂದು ಸಹಿ ಮಾಡದೆ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡಿದ್ದು,ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದುದರಿಂದ, ಈ ಲೋಕವನ್ನು ತ್ಯಜಿಸುತ್ತಿದ್ದೇನೆ” ಎಂದು ತಿಳಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮೃತ ವಿದ್ಯಾರ್ಥಿಯ ತಾಯಿ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚಿಗೆ ಇಂತಹ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದು, ಪರವೂರಿನಿಂದ ಬರುವ ವಿದ್ಯಾರ್ಥಿಗಳು ಇಂತಹ ಪ್ರಕರಣಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಒಂದು ಸಮಿತಿಯನ್ನು ರಚಿಸಿ, ಕಾಲೇಜುಗಳ ಮೇಲೆ ನಿಗಾ ಇಡಬೇಕು. ಮನಶಾಸ್ತ್ರಜ್ಞರನ್ನು ನೇಮಿಸಿ ವಿದ್ಯಾರ್ಥಿಗಳಲ್ಲಿ ಮೂಲಭೂತ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಎಸ್.ಐ.ಒ. ಪ್ರಕಟನೆಯಲ್ಲಿತಿಳಿಸಿದೆ.