ಇಟಾ ನಗರ: ನಾವಿರುವುದು 1962ರಲ್ಲಿ ಅಲ್ಲ. ಯಾರಾದರೂ ಅತಿಕ್ರಮಣ ಮಾಡಲು ಪ್ರಯತ್ನಿಸಿದರೆ, ನಮ್ಮ ಧೈರ್ಯಶಾಲಿ ಸೈನಿಕರು ಸೂಕ್ತ ಪ್ರತ್ಯುತ್ತರ ನೀಡುತ್ತಾರೆ ಎಂದು ತವಾಂಗ್ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ ಚೀನಾಗೆ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತವಾಂಗ್ ಗಡಿ ಸಂಘರ್ಷ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಚೀನಾ ಗಡಿ ತಂಟೆ ಮಾಡಿದ ಯಾಂಗ್ಟನ್ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ನಾನು ಯೋಧರು ಮತ್ತು ಗ್ರಾಮಸ್ಥರನ್ನು ಭೇಟಿಯಾಗುತ್ತೇನೆ. ಗಡಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಯಾವುದೇ ಯತ್ನವನ್ನು ನಮ್ಮ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಲಿದ್ದು, ತಕ್ಕ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಟ್ವೀಟ್ ಮಾಡಿರುವ ಪೆಮಾ ಖಂಡು, ಇದು 1962 ಅಲ್ಲ. ಯಾರಾದರೂ ಗಡಿ ನಿಯಮ ಉಲ್ಲಂಘಿಸಲು ಪ್ರಯತ್ನಿಸಿದರೆ, ನಮ್ಮ ವೀರ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ದೇಶದ ಜಾಗವನ್ನು ಅತಿಕ್ರಮಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ನಾವು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಗಡಿ ಸಂಘರ್ಷ ಕುರಿತು ಚೀನಾ ಸರ್ಕಾರ ಇದೂವರೆಗೂ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.