SDPI ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ರಾಷ್ಟ್ರೀಯ ನಾಯಕ ತಸ್ಲೀಮ್ ರೆಹ್ಮಾನಿ

Prasthutha|

SDPI ಪಕ್ಷದ ರಾಷ್ಟ್ರೀಯ ನಾಯಕರಾಗಿದ್ದ ಡಾ. ತಸ್ಲೀಮ್ ರೆಹ್ಮಾನಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.  ನವಂಬರ್ 3 ರಂದು ಚೆನ್ನೈಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಅಧ್ಯಕ್ಷರಿಗೆ  ಈಮೈಲ್ ಮಾಡುವುದಾಗಿಯೂ ಈ ವೇಳೆ ತಿಳಿಸಿದ್ದರು ಎನ್ನಲಾಗಿದೆ. ಅವರ ರಾಜೀನಾಮೆಯನ್ನು ಅಧ್ಯಕ್ಷ ಎಂ. ಕೆ. ಫೈಝಿಯವರು ಇಂದು ಅಂಗೀಕರಿಸಿದ್ದಾರೆ.   

- Advertisement -

ತನ್ನ ರಾಜೀನಾಮೆ ಪತ್ರದಲ್ಲಿ ಡಾ. ತಸ್ಲೀಮ್ ರೆಹ್ಮಾನಿಯವರು, “ಪಕ್ಷದ ಸಿದ್ಧಾಂತವನ್ನು ಮತ್ತು ತಮ್ಮನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಕಾರ್ಯಕರ್ತರು ಮತ್ತು ಕೇಡರ್ ಗಳನ್ನು ನಾನು ಶ್ಲಾಘಿಸುತ್ತೇನೆ.  ಪಕ್ಷದ ರಾಜಕೀಯ ತಂತ್ರಗಾರಿಕೆಯ ಕೊರತೆಯ ಕುರಿತು ನಾನು ಅಸಮಾಧಾನ ಹೊಂದಿದ್ದೇನೆ. ಅದೊಂದು ಕಾರ್ಪೊರೇಟ್ ಶೈಲಿಯಲ್ಲಿ ಇದೆ, ಅದು ರಾಜಕೀಯ ಪಕ್ಷದ ರೀತಿಯಲ್ಲಾಗಬೇಕು.  ಆ  ಕಾರಣದಿಂದಾಗಿ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ತನ್ನ ರಾಜೀನಾಮೆ ಪತ್ರದಲ್ಲಿ  ರೆಹ್ಮಾನಿಯವರು, ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಬೆಂಬಲಿಸಿದ ಪಕ್ಷದ ಎಲ್ಲಾ ನಾಯಕರಿಗೆ, ಕೇಡರ್ ಗಳಿಗೆ ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರನ್ನು ಈ ಕುರಿತಾಗಿನ ಪ್ರತಿಕ್ರಿಯೆಗಾಗಿ ‘ಪ್ರಸ್ತುತ’ ಸಂಪರ್ಕಿಸಿದಾಗ, “ತಸ್ಲೀಮ್ ರೆಹ್ಮಾನಿಯವರು ರಾಜೀನಾಮೆ ನೀಡಿರುವುದು ಹೌದು. ಅದು ಅವರ ವೈಯಕ್ತಿಕ ನಿರ್ಧಾರವಾಗಿದೆ ಮತ್ತು ಅದನ್ನು ಗೌರವಿಸುತ್ತೇವೆ.  ಅವರು  ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾರ್ಯಕಾರಿ ಮಂಡಳಿಯ ಸದಸ್ಯ ಮಾತ್ರವಲ್ಲ, ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದವರು. ಈ ವೇಳೆ ಪಕ್ಷದ ಬೆಳವಣಿಗೆ ಮತ್ತು ಅಭಿವೃದ್ಧಿಯ ಕುರಿತಂತೆ ಚರ್ಚೆಯ ಹಲವಾರು ಸಭೆಗಳಲ್ಲಿ ಅವರೂ ಭಾಗವಹಿಸಿದ್ದರು. ಯಾವುದೇ ವಿಷಯಗಳ ಕುರಿತು ಮಾತನಾಡಲು ಅವರು ಸರ್ವ ಸ್ವತಂತ್ರರಾಗಿದ್ದರು. ಆದರೆ ಇತರೆ ಹಲವು ಗಂಭೀರ ರಾಷ್ಟ್ರೀಯ ಸಮಸ್ಯೆಗಳ ಕುರಿತಂತೆ ಮಾತನಾಡಿ ಗಮನ ಸೆಳೆದಿದ್ದ ರೆಹ್ಮಾನಿಯವರು ಈಗ ನೀಡಿರುವ ರಾಜೀನಾಮೆ ಪತ್ರದಲ್ಲಿನ ಪ್ರಸಕ್ತ ಹೇಳಿಕೆಯು ಆಶ್ಚರ್ಯ ಮೂಡಿಸಿದೆ” ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.   

Join Whatsapp