ನಾಗಪಟ್ಟಣಂ: ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ‘ಎನ್ ಮನ್ನ್ ಎನ್ನ ಮಕ್ಕಳ್’ ರ್ಯಾಲಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡಿದ್ದು, ಅವರನ್ನು ಅಮಾನತು ಮಾಡಲಾಗಿದೆ.
ಡಿಸೆಂಬರ್ 27 ರಂದು ನಾಗಪಟ್ಟಣಂ ಜಿಲ್ಲೆಯಲ್ಲಿ ಅಣ್ಣಾಮಲೈ ಅವರ ಯಾತ್ರೆಯ ಸಂದರ್ಭದಲ್ಲಿ ಸ್ಥಾಪಿಸಲಾದ ಸ್ಟಾಲ್‌ಗಳಲ್ಲಿ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಕೆ ರಾಜೇಂದ್ರನ್ ಮತ್ತು ವಿಶೇಷ ಸೆಲ್‌ನ ಸಬ್ ಇನ್ಸ್‌ಪೆಕ್ಟರ್ ಎ ಕಾರ್ತಿಕೇಯನ್ ಬಿಜೆಪಿಯ ಸದಸ್ಯತ್ವನ್ನು ಪಡೆದುಕೊಂಡಿದ್ದಾರೆ. ವೇಲಿಪಾಳ್ಯಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಈ ಇಬ್ಬರು ಅಧಿಕಾರಿಗಳು ದೂರವಾಣಿ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಸದಸ್ಯತ್ವ ಪಡೆದಿದ್ದಾರೆ.
ಘಟನೆಯು ನಾಗಪಟ್ಟಣಂ ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಸಿಂಗ್ ಗಮನಕ್ಕೆ ಬಂದ ತಕ್ಷಣ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳನ್ನು 36 ಗಂಟೆಗಳ ಒಳಗೆ ಸಶಸ್ತ್ರ ಮೀಸಲು ಪಡೆಗೆ ವರ್ಗಾಯಿಸಲಾಗಿತ್ತು. ಅಲ್ಲದೆ, ಉಪ ಪೊಲೀಸ್ ವರಿಷ್ಠಾಧಿಕಾರಿಯಿಂದ ಇಲಾಖಾ ತನಿಖೆಗೆ ಎಸ್ಪಿ ಸಿಂಗ್ ಆದೇಶಿಸಿದ್ದರು. ವಿಚಾರಣೆಯ ನಂತರ ಅವರು ಬಿಜೆಪಿಯ ಸದಸ್ಯತ್ವ ಪಡೆದಿರುವುದು ಬಯಲಾಗಿದೆ. ಬಳಿಕ ಎಸ್ಪಿ ಸಿಂಗ್ ಅವರ ಶಿಫಾರಸ್ಸಿನ ಮೇರೆಗೆ ತಂಜಾವೂರು ರೇಂಜ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಟಿ ಜಯಚಂದ್ರನ್ ಇಬ್ಬರನ್ನೂ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಸಂಬಂಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಈ ಬಗ್ಗೆ ಸ್ಟಾಲ್‌ನ ಪ್ರತಿನಿಧಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ಯಾವುದೇ ವಿಚಾರಣೆ ನಡೆಸದೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದು ಬೇಸರ ತಂದಿದೆ. ಇದು ಅಧಿಕಾರಿಗಳ ಮೇಲೆ ಮಾತ್ರವಲ್ಲ, ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಕ್ರಮವು ಪೊಲೀಸ್ ಪಡೆಗೆ ಸೇರಲು ಆಗ್ರಹಿಸುವ ಯುವಕರನ್ನು ನಿರುತ್ಸಾಹಗೊಳಿಸುತ್ತದೆ ಎಂದು ಹೇಳಿದ್ದಾರೆ.