Home ಟಾಪ್ ಸುದ್ದಿಗಳು ಶೋಭಾ ಕರಂದ್ಲಾಜೆ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ತೀವ್ರ ಖಂಡನೆ

ಶೋಭಾ ಕರಂದ್ಲಾಜೆ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ತೀವ್ರ ಖಂಡನೆ

ಚೆನ್ನೈ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ಹಿಂದೆ ತಮಿಳುನಾಡಿನ ಜನರ ಕೈವಾಡವಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ತಮಿಳು ನಾಡು ಸಿಎಂ ಎಂಕೆ ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ.

ಸಚಿವೆ ದ್ವೇಷ ಭಾಷಣ ಮಾಡಿದ್ದಾರೆ. ಆಕೆಯ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಚುನಾವಣಾ ಆಯೋಗವನ್ನು ಸ್ಟಾಲಿನ್ ಒತ್ತಾಯಿಸಿದ್ದಾರೆ.

ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಇಲ್ಲಿಗೆ ಬಂದು ಬಾಂಬ್‌ಗಳನ್ನು ಇಡುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿರುವ ವೀಡಿಯೊವನ್ನು ಸ್ಟಾಲಿನ್ ಹಂಚಿಕೊಂಡಿದ್ದು, ಇದು ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಇಂತಹ ಹೇಳಿಕೆಗಳನ್ನು ಕೊಡಬೇಕೆಂದರೆ ಅವರು ಒಬ್ಬರು NIA ಅಧಿಕಾರಿಯಾಗಿರಬೇಕು ಅಥವಾ #RameshwaramCafeBlast ನೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು. ಅಲ್ಲದಿದ್ದಲ್ಲಿ ಇಂತಹ ಹೇಳಿಕೆ ಕೊಡಲು ಕರಂದ್ಲಾಜೆ ಅವರಿಗೆ ಯಾವ ಅಧಿಕಾರ ಇದೆ ಎಂದು ಸ್ಟಾಲಿನ್ ಕೇಳಿದ್ದಾರೆ.

ಪ್ರಧಾನಿಯಿಂದ ಹಿಡಿದು ಕಾರ್ಯಕರ್ತರವರೆಗೆ ಬಿಜೆಪಿಯ ಎಲ್ಲರೂ ಇಂತಹ ಕೊಳಕು ವಿಭಜನೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ತಮಿಳು ನಾಡು‌ ಮುಖ್ಯಮಂತ್ರಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಕೂಡ ಶೋಭಾ ಹೇಳಿಕೆಯನ್ನು ಖಂಡಿಸಿದ್ದಾರೆ. ತಮಿಳುನಾಡಿನ ಜನರನ್ನು ಉಗ್ರಗಾಮಿಗಳೆಂದು ಸಾಮಾನ್ಯೀಕರಿಸುವ ಉದ್ದೇಶದಿ ಸಚಿವೆಯ ದ್ವೇಷದ ಭಾಷಣವನ್ನು ಬಲವಾಗಿ ಖಂಡಿಸುತ್ತೇನೆ. ವಿಭಜನೆ ಉದ್ದೇಶದಂತಹ ಇಂತಹ ದ್ವೇಷ ಭಾಷಣಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಇಸಿಐಗೆ ಮನವಿ ಮಾಡಿದ್ದಾರೆ.

ಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ. ಮತ್ತೊಬ್ಬ ವ್ಯಕ್ತಿ ದೆಹಲಿಯಿಂದ ಬಂದು ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗುತ್ತಾನೆ. ಇನ್ನೊಬ್ಬ ವ್ಯಕ್ತಿ ಕೇರಳದಿಂದ ಬಂದು ಕಾಲೇಜು ವಿದ್ಯಾರ್ಥಿಗಳ ಮೇಲೆ ಆಸಿಡ್ ಎರಚಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು.

ತಮ್ಮ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ.

Join Whatsapp
Exit mobile version