Home ಟಾಪ್ ಸುದ್ದಿಗಳು ಎನ್​​ಡಿಎ ಮೈತ್ರಿಯಿಂದ ಹೊರಬರಲು ನಿರ್ಧರಿಸಿದ ಎಐಎಡಿಎಂಕೆ

ಎನ್​​ಡಿಎ ಮೈತ್ರಿಯಿಂದ ಹೊರಬರಲು ನಿರ್ಧರಿಸಿದ ಎಐಎಡಿಎಂಕೆ

ಚೆನ್ನೈ: ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೋಮವಾರ ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬರುವ ನಿರ್ಧಾರ ಪ್ರಕಟಿಸಿದೆ.

ಪಳನಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನ ಕಚೇರಿಯ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯದರ್ಶಿಗಳು ಈ ಕುರಿತು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಮಾಜಿ ಸಚಿವರು ಮತ್ತು ಹಿರಿಯ ಮುಖಂಡರಾದ ಕೆ. ಪಿ. ಮುನುಸಾಮಿ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಜಿ ಸಚಿವರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ನಡುವೆ ನಿರ್ಣಯವನ್ನು ಓದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಬಿಜೆಪಿ ರಾಜ್ಯ ನಾಯಕತ್ವವು ಎಐಎಡಿಎಂಕೆ, ನಮ್ಮ ನಾಯಕರು, ಅಣ್ಣಾ ಮತ್ತು ಅಮ್ಮ (ದಿವಂಗತ ಮುಖ್ಯಮಂತ್ರಿಗಳಾದ ಸಿ.ಎನ್. ಅಣ್ಣಾದೊರೈ ಮತ್ತು ಜೆ. ಜಯಲಲಿತಾ) ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಇದು ಉದ್ದೇಶಪೂರ್ವಕವಾಗಿ ಮತ್ತು ಎಐಎಡಿಎಂಕೆ ತತ್ವಗಳನ್ನು ಟೀಕಿಸುತ್ತಿದೆ ಎಂದು ಹೇಳಿದ್ದು, ಮೈತ್ರಿಯಿಂದ ಹೊರಬರುವ ನಿರ್ಣಯ ತೆಗೆದುಕೊಂಡಿದೆ.

ಸೆಪ್ಟೆಂಬರ್ 20ರಂದು ಮಧುರೈನಲ್ಲಿ ನಡೆದ ಎಐಎಡಿಎಂಕೆಯ ಐತಿಹಾಸಿಕ ಸಮಾವೇಶವನ್ನು ಬಿಜೆಪಿ ನಾಯಕತ್ವವು ಕೀಳಾಗಿ ಪರಿಗಣಿಸಿದೆ. ಎರಡು ಕೋಟಿ ಕಾರ್ಯಕರ್ತರ ಪಕ್ಷವನ್ನು ಪಳನಿಸ್ವಾಮಿ ಮುನ್ನಡೆಸುತ್ತಿದ್ದಾರೆ ಎಂದು ನಿಂದಿಸಿದ್ದಾರೆ. ಇದು ಕಾರ್ಯಕರ್ತರು ಮತ್ತು ಪದಾಧಿಕಾರಿಗಳಲ್ಲಿ ಬೇಸರ ಉಂಟುಮಾಡಿದೆ. ಕಾರ್ಯಕರ್ತರ ಭಾವನೆಗಳನ್ನು ಗೌರವಿಸುವ ಮೂಲಕ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವ ತನ್ನ ನಿರ್ಧಾರವನ್ನು ಎಐಎಡಿಎಂಕೆ ಸಮರ್ಥಿಸಿಕೊಂಡಿದೆ.

Join Whatsapp
Exit mobile version