Home ಟಾಪ್ ಸುದ್ದಿಗಳು ತಮಿಳುನಾಡು: ಮಸೀದಿಯಲ್ಲಿ 30 ಹಿಂದೂ ಕುಟುಂಬಗಳಿಗೆ ಆಶ್ರಯ

ತಮಿಳುನಾಡು: ಮಸೀದಿಯಲ್ಲಿ 30 ಹಿಂದೂ ಕುಟುಂಬಗಳಿಗೆ ಆಶ್ರಯ

ಚೆನ್ನೈ: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ಪ್ರಭಾವಕ್ಕೆ ಸುರಿದ ಮಳೆ ಪ್ರವಾಹ ಸೃಷ್ಟಿಸಿದ್ದು, ದಕ್ಷಿಣದ ಜಿಲ್ಲೆಗಳಲ್ಲಿ ಜನಸಜೀವನ ಅಸ್ತವ್ಯಸ್ತವಾಗಿತ್ತು. ಈ ವೇಳೆ ಸೇಡುಂಗನಲ್ಲೂರ್ ಬೈತುಲ್ಮಾಲ್ ಜಮಾತ್ ಮಸೀದಿ ಪ್ರವಾಹದಿಂದ ಮನೆ ಕಳೆದುಕೊಂಡ 30 ಹಿಂದೂ ಕುಟುಂಬಗಳಿಗೆ ಆಶ್ರಯವನ್ನು ನೀಡಿದೆ.

ತಿರುನಲ್ವೇಲಿಯಿಂದ ತೂತುಕುಡಿ ರಸ್ತೆಯಲ್ಲಿರುವ ಸೇಡುಂಗನಲ್ಲೂರ್ ಬೈತುಲ್ಮಾಲ್ ಜಮಾತ್ ಮಸೀದಿಯು ಪ್ರವಾಹದಿಂದ ಮನೆ ಕಳೆದುಕೊಂಡ ಸುಮಾರು 30 ಹಿಂದೂ ಕುಟುಂಬಗಳಿಗೆ ಆಶ್ರಯದ ಜೊತೆಗೆ ಬಟ್ಟೆ, ಔಷಧಿಗಳು, ಆಹಾರ ಮತ್ತು ಅಗತ್ಯ ವಸ್ತುಗಳ ವ್ಯವಸ್ಥೆಯನ್ನು ಕೂಡ ಮಾಡಿದೆ.

ಪ್ರವಾಹ ಸಂತ್ರಸ್ತರ ಜೊತೆ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ಮತ್ತು ಸ್ಥಳಾವಕಾಶ ಕಲ್ಪಿಸಲು ಮಸೀದಿಯಲ್ಲಿ ಎಲ್ಲಾ ಸಾಮೂಹಿಕ ಪ್ರಾರ್ಥನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರವಾಹ ಸಂತ್ರಸ್ತ ಹಿಂದೂ ಸಮುದಾಯದ ಜನರು ಮಸೀದಿಯಿಂದ ತಮ್ಮ-ತಮ್ಮ ಮನೆಗಳಿಗೆ ಹಿಂದಿರುಗುವವರೆಗೆ ನಾವು ಯಾವುದೇ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸದಿರಲು ನಿರ್ಧರಿಸಿದ್ದೇವೆ. ನಾವು ಏಕತೆ ಮತ್ತು ಸಮಾನತೆಯನ್ನು ನಂಬುತ್ತೇವೆ. ಪ್ರವಾಹ ಬಂದಾಗ ನಾವು ಜಮಾಅತ್ ಸಮಿತಿಯಲ್ಲಿ ಸಭೆ ನಡೆಸಿದ್ದೇವೆ ಮತ್ತು ಮಸೀದಿಯನ್ನು ಪರಿಹಾರ ಶಿಬಿರವಾಗಿ ತೆರೆಯಲು ನಿರ್ಧರಿಸಿದ್ದೇವೆ ಎಂದು ಜಮಾತ್ ಸಮಿತಿಯ ಸದಸ್ಯ ಇಮ್ರಾನ್ ಖಾನ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಪ್ರವಾಹದಿಂದ ನಿರಾಶ್ರಿತರಾದ ಕೋವಿಲ್‌ಪತ್‌ನ ತಮಿಳರಸಿ ಎಂಬ ಮಹಿಳೆ, ಮಸೀದಿಯಲ್ಲಿ ನಮ್ಮನ್ನು ಸ್ವಾಗತಿಸಲಾಗಿದೆ. ಅವರು ಎಂದಿಗೂ ಮಹಿಳೆಯರು ಮಸೀದಿಗೆ ಪ್ರವೇಶಿಸಬಾರದು ಎಂದು ಹೇಳಲಿಲ್ಲ. ಅವರು ನಮಗೆ ಬೇಕಾದಷ್ಟು ದಿನ ಇಲ್ಲಿಯೇ ಇರಬಹುದು ಎಂದು ಹೇಳಿದರು. ಆಹಾರದಿಂದ ಹಿಡಿದು ಔಷಧಿಗಳವರೆಗೆ ಅವರು ನಮಗೆ ಎಲ್ಲವನ್ನೂ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

ಮಸೀದಿಯಲ್ಲಿ ಆಶ್ರಯ ಪಡೆದಿರುವ ಮತ್ತೋರ್ವ ಮಹಿಳೆ ದೈವಕನಿ, ನಾವು 4 ದಿನಗಳ ಹಿಂದೆ ನಾವು ಧರಿಸಿದ್ದ ಬಟ್ಟೆಯೊಂದಿಗೆ ಇಲ್ಲಿಗೆ ಬಂದಿದ್ದೇವೆ. ನಮ್ಮಲ್ಲಿ ಬೇರೆ ಏನೂ ಇರಲಿಲ್ಲ. ಈ ಮಸೀದಿಯಲ್ಲಿ ಉಳಿದೆಲ್ಲವನ್ನೂ ಅವರು ನಮಗೆ ಒದಗಿಸಿದ್ದಾರೆ. ಇಲ್ಲಿ ಆಶ್ರಯ ಪಡೆದಿರುವವರೆಲ್ಲರೂ ಹಿಂದೂಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ವಿದ್ಯುತ್ ಸಂಪರ್ಕ, ಮೊಬೈಲ್ ಫೋನ್ ಸಂಪರ್ಕ ಕಡಿತಗೊಂಡು ಸಾರ್ವಜನಿಕ ಸಾರಿಗೆ ಕೂಡ ಅಸ್ತವ್ಯಸ್ತಗೊಂಡಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ 12ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಮೈಚಾಂಗ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡಿನ 4 ದಕ್ಷಿಣ ಜಿಲ್ಲೆಗಳಾದ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ರಾಮನಾಥಪುರಂನಲ್ಲಿ ಡಿ.17 ಮತ್ತು 18ರಂದು ಭಾರೀ ಮಳೆಯಾಗಿದೆ. ಇದರಿಂದಾಗಿ ಉಂಟಾದ ಪ್ರವಾಹದಲ್ಲಿ ಅನೇಕ ಪ್ರದೇಶಗಳು ಸಂಪರ್ಕ ಕಡಿತಗೊಂಡವು ಮತ್ತು ಹಲವಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಗಳು ಮತ್ತು ರಾಜ್ಯ ವಿಪತ್ತು ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿತ್ತು.

Join Whatsapp
Exit mobile version