ಕಾಬೂಲ್: ತಾಲಿಬಾನ್ ನ ಸರ್ವೋಚ್ಚ ನಾಯಕರಾಗಿದ್ದ ಹೈಬತುಲ್ಲಾ ಅಖುಂದ್ಜಾದಾ ಅಫ್ಘಾನ್ನ ದಕ್ಷಿಣ ನಗರವಾದ ಕಂದಹಾರ್ ನಲ್ಲಿ ದಿಢೀರ್ ಪ್ರತ್ಯಕ್ಷಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅವರ ಸಾವಿನ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಮಧ್ಯೆಯೇ ಅವರು ಕಂದಹಾರ್ ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ತಾಲಿಬಾನ್ ಮೂಲಗಳು ತಿಳಿಸಿವೆ.
ಅಮೀರ್ ಉಲ್ ಮುಹ್’ಮಿನೀನ್ (ನಿಷ್ಠಾವಂತ ನಾಯಕ) ಎಂದು ಕರೆಯಲ್ಪಡುವ ಅಖುಂದ್ಜಾದಾ, ತಾಲಿಬಾನ್ ಆಗಸ್ಟ್ ನಲ್ಲಿ ಅಫ್ಘಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರವೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
ಶನಿವಾರ ಕಂದಹಾರ್ ನಲ್ಲಿರುವ ಧಾರ್ಮಿಕ ಶಾಲೆಯಾದ ಜಾಮಿಯಾ ದಾರುಲ್ ಉಲೂಮ್ ಹಕಿಮಿಯಾಗೆ ಇವರು ಭೇಟಿ ನೀಡಿದ್ದರು ಎಂದು ಹೈಬತುಲ್ಲಾ ಅಖುಂದ್ಜಾದಾರೊಂದಿಗೆ ಹಾಜರಿದ್ದ ಹಿರಿಯ ತಾಲಿಬಾನ್ ನಾಯಕರೊಬ್ಬರು ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.