ತಾಲಿಬಾನ್: ವಿಶ್ಲೇಷಣೆಗೆ ಇದು ಸಕಾಲವೇ?

Prasthutha|

2001ರಲ್ಲಿ ತಾಲಿಬಾನ್ ಸೈನಿಕರನ್ನು ನಾಶಗೊಳಿಸಲು ಅಫ್ಘಾನ್‌ ಗೆ ದಾಳಿ ನಡೆಸಿದ ಅಮೆರಿಕ, ಈಗ ಸೋತು ಅಫ್ಘಾನ್ ಭೂಪ್ರದೇಶದಿಂದ ವಾಪಸಾತಿ ಪ್ರಕ್ರಿಯೆ ಆರಂಭಿಸಿದ್ದು, ಹೆಚ್ಚು ಕಡಿಮೆ ಇದು ಪೂರ್ಣಗೊಂಡಿದೆ. ಈ ಮಧ್ಯೆ ತಾಲಿಬಾನ್ ಕಾಬೂಲ್ ತಲುಪಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದೆ. ಎರಡು ದಶಕಗಳಿಂದ ಅಫ್ಘಾನಿನಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ನಡೆಸಿದ ಮೇಲಾಟದಲ್ಲಿ ಎರಡೂವರೆ ಲಕ್ಷ ಜನರನ್ನು ಕೊಂದು ಹಾಕಿದ ನಂತರವೂ ತಮ್ಮ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ ಎಂಬ ಜ್ಞಾನೋದಯವಾದಾಗ ಅಮೆರಿಕ ವಾಪಸಾತಿಗೆ ತೀರ್ಮಾನಿಸಿತು.

ಈ ಹಿಂದೆ ವಿಯೆಟ್ನಾಂ, ಗ್ವಾಟಮಾಲ, ಕಾಂಗೋ ರಾಷ್ಟ್ರಗಳಲ್ಲಿ ಗುರಿಯನ್ನು ಸಾಧಿಸಲಾಗದೇ ಅಮೆರಿಕ ಪಲಾಯನ ಮಾಡಿತ್ತು. ಈಗ ಅಫ್ಘಾನ್‌ ನಲ್ಲಿ ನಡೆಯುತ್ತಿರುವುದು ಅದರ ಮುಂದುವರಿದ ಭಾಗವಾಗಿದೆ. ಕಳೆದ ಜುಲೈ ತಿಂಗಳಲ್ಲಿ ಅಮೆರಿಕದ ಕಾಂಗ್ರೆಸ್ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, 88,000 ಕೋಟಿ ಅಮೆರಿಕನ್ ಡಾಲರ್ ಈ ವಸಾಹತಿಗಾಗಿ ಅಫ್ಘಾನ್ ನೆಲದಲ್ಲಿ ವ್ಯಯಿಸಿದೆ. ಮಾತ್ರವಲ್ಲದೆ ಅತ್ಯಂತ ಕಠಿಣವಾದ ತರಬೇತಿ ಪಡೆದ ಮೂರು ಲಕ್ಷ ಸಂಖ್ಯೆಯ ಸೈನಿಕರ ಬಲ ಇದ್ದರೂ ಸೋಲು ಖಾತರಿಯಾದಾಗ ಒಂದೂವರೆ ವರ್ಷದ ಹಿಂದೆಯೇ ವಿವಿಧ ಜಾಗತಿಕ ರಾಷ್ಟ್ರಗಳ ನೆರವಿನೊಂದಿಗೆ ದೋಹಾದಲ್ಲಿ ತಾಲಿಬಾನ್‌ ನೊಂದಿಗೆ ಅಧಿಕಾರನ್ನು ಹಸ್ತಾಂತರಿಸುವ ಚರ್ಚೆ ನಡೆಸಿ ಅಫ್ಘಾನ್‌ ನಿಂದ ಹಿಂದೆ ಸರಿಯುವ ತೀರ್ಮಾನವನ್ನು ಮಾಡಿತ್ತು.

- Advertisement -

ಆಡಳಿತದಲ್ಲಿ ಪಾಲುದಾರರಾಗಿದ್ದ ಅಧಿಕಾರಿಗಳ ಸಹಿತ ನಾಗರಿಕರಿಗೆ ಸಾರ್ವಜನಿಕ ಕ್ಷಮಾದಾನವನ್ನು ಘೋಷಿಸಿ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ದೇಶ ತೊರೆಯಲು ಅನುಮತಿಸಿದ ತಾಲಿಬಾನ್, ರಕ್ತಪಾತವಿಲ್ಲದೆ ಕಾಬೂಲ್ ತಲುಪಿತು. ಆದರೆ ಪಾಶ್ಚಿಮಾತ್ಯ ಮಾಧ್ಯಮಗಳು, ನವ ಪ್ರಗತಿಪರರು ಅಫ್ಘಾನಿನ ಮಹಿಳೆಯರು ಮತ್ತು ಮಕ್ಕಳ ದುರಂತ ಭವಿಷ್ಯವನ್ನು ಕಂಡು ಮರುಗಿ ಅನಗತ್ಯ ಆತಂಕದಿಂದ ಪ್ರತಿಕ್ರಿಯಿಸುವುದನ್ನು ನಾವು ನೋಡುತ್ತಿದ್ದೇವೆ. ಬಿಬಿಸಿಯ ವಾರ್ತಾ ನಿರೂಪಕಿಯೊಂದಿಗೆ ಮಾತನಾಡುವ ವೇಳೆ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಅವರು, ಮಹಿಳೆಯರಿಗೆ ಶಿಕ್ಷಣವನ್ನು ಪಡೆಯಲು ಮತ್ತು ಉದ್ಯೋಗವನ್ನು ಹೊಂದಲು ಮನೆಯಿಂದ ಒಂಟಿಯಾಗಿ ಹೊರ ನಡೆಯಲು ಸ್ವಾತಂತ್ರ್ಯವನ್ನು ನಾವು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಮೆರಿಕನ್ ಸೇನೆಯ ಸೋಲು ಮತ್ತು ವಾಪಸಾತಿ ಅಫ್ಘಾನ್‌ ನಲ್ಲಿ ಜೀವನ ಸುರಕ್ಷೆ ಮತ್ತು ಶಾಂತಿ ನೆಮ್ಮದಿಯನ್ನು ಮರಳಿ ತರಲು ಸಹಾಯವಾಗಲಿದೆ ಎಂದು ಇರಾನಿನ ಹೊಸ ಅಧ್ಯಕ್ಷ ಇಬ್ರಾಹಿಂ ರೈಸಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಆಶಾವಾದ ನಿಜವಾಗಲಿ ಎಂಬುದೇ ಎಲ್ಲರ ಆಸೆಯೂ ಆಗಿದೆ.

ಇದರ ಹೊರತಾಗಿ ಭಾರತದ ಮಾಜಿ ರಾಜತಂತ್ರಜ್ಞ ಎಂ.ಕೆ ಭದ್ರಕುಮಾರ್ ಅವರಂತಹ ಅಧಿಕಾರಿಗಳು ಕೂಡ, ತಾಲಿಬಾನ್ ಕುರಿತು ಕೇಳಿಬರುತ್ತಿರುವ ಭಯಾನಕ ಕಥೆಗಳಲ್ಲಿ ಹೆಚ್ಚಿನವು ಸುಳ್ಳು ಎಂದು ಹೇಳಿದ್ದಾರೆ. ಸಾಮ್ರಾಜ್ಯಶಾಹಿಗಳನ್ನು ಸೋಲಿಸಿ ಅಧಿಕಾರಕ್ಕೆ ಬಂದ ತಾಲಿಬಾನ್‌ ನನ್ನು ವಿಶ್ಲೇಷಿಸುವ ವಿಚಾರದಲ್ಲಿ ಜಾತ್ಯತೀತ ನೇತಾರರಲ್ಲೂ ಇಸ್ಲಾಮೋಫೋಬಿಯದಂತಹ ಧೋರಣೆಗಳು ಇವೆಯೇ ಎಂದು ಅನುಮಾನ ಪಡುವ ರೀತಿಯ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ತಾಲಿಬಾನ್ ಮತ್ತು ಅವರ ನಿಲುವುಗಳನ್ನು ಮತ್ತು ಆಡಳಿತವನ್ನು ವಿಶ್ಲೇಷಿಸಲು ಇದು ಸೂಕ್ತ ಸಮಯವೇ ಎಂದು ನಾವು ಚಿಂತಿಸಬೇಕಾಗಿದೆ.

- Advertisement -